ಡೈಲಿ ವಾರ್ತೆ: 19 ಜೂನ್ 2023

ರಾಜ್ಯದಲ್ಲಿ ಅಕ್ಕಿರಾಜಕೀಯ ತೀವ್ರ; ನಾಳೆ ಕೇಂದ್ರದ ವಿರುದ್ಧ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು: ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಅಕ್ಕಿ ರಾಜಕೀಯ ತೀವ್ರಗೊಂಡಿದ್ದು, ಇದೀಗ ಪ್ರತಿಭಟನೆಯ ಸ್ವರೂಪಕ್ಕೆ ತಿರುಗಿದೆ. ದುಡ್ಡುಕೊಟ್ಟರೂ ಅಕ್ಕಿ ಕೊಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಜೂನ್ 20ರಂದು ಬೃಹತ್‌ ಪ್ರತಿಭಟನೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲು ಮುಂದಾಗಿದ್ದು, ಇದಕ್ಕೆ ಬೇಕಾಗಿರುವ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ಕೇಂದ್ರದಿಂದಲೇ ಪಡೆಯಲು ನಿರ್ಧರಿಸಲಾಗಿತ್ತು. ಆದರೆ, ಆಹಾರ ನಿಗಮವು ಮೊದಲು ಅಕ್ಕಿ ನೀಡಲು ಒಪ್ಪಿಕೊಂಡಿದ್ದರೂ ಕೇಂದ್ರ ಸರ್ಕಾರ ತನ್ನ ನೀತಿಯನ್ನೇ ಬದಲಿಸಿ ರಾಜ್ಯ ಸರ್ಕಾರಗಳಿಗೆ ಅಕ್ಕಿ ನಿರಾಕರಣೆ ಮಾಡಿದ್ದು ರಾಜ್ಯದ ಜನತೆಗೆ ಮಾಡಿದ ದ್ರೋಹ ಎನ್ನುವುದು ಕಾಂಗ್ರೆಸ್ ನಾಯಕರ ಆರೋಪ. ಇದನ್ನೇ ಮುಂದಿಟ್ಟುಕೊಂಡು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಅದು ಮುಂದಾಗಿದೆ.