ಡೈಲಿ ವಾರ್ತೆ: 19 ಜೂನ್ 2023
ತುಂಬೆಯಲ್ಲಿ ಸಂಸ್ಥಾಪಕರ ದಿನಾಚರಣೆ
ಬಂಟ್ವಾಳ : ಡಾ| ಬಿ. ಅಹ್ಮದ್ ಹಾಜಿ ಅವರು ಓರ್ವ ಆದರ್ಶ ವ್ಯಕ್ತಿತ್ವದವರು, ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಉದ್ಯಮ ರಂಗ, ವೈದ್ಯಕೀಯವೇ ಮೊದಲಾದ ಕ್ಷೇತ್ರಗಳ ಸಾಧನೆಗಳು ಅಗಣಿತವಾದದ್ದು. ಅವರ ಜೀವನ ಮಾರ್ಗದ ಪ್ರತಿ ಹೆಜ್ಜೆ ಹೆಜ್ಜೆಯೂ ನಮಗೆ ಸ್ಪೂರ್ತಿದಾಯಕವಾಗಿದ್ದು ಮುಂದಿನ ಪೀಳಿಗೆಗೆ ರೋಲ್ ಮಾಡೆಲ್ ಆಗಿದ್ದಾರೆ ಎಂಬುದಾಗಿ ತುಂಬೆ ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಹೇಳಿದರು. ಅವರು ತುಂಬೆ ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್‌ನ ವಿವಿಧ ವಿದ್ಯಾಸಂಸ್ಥೆಗಳು ಜಂಟಿಯಾಗಿ ಏರ್ಪಡಿಸಿದ್ದ ಸಂಸ್ಥಾಪಕರ ದಿನಾಚರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಲ್ಲುಡಿಯನ್ನು ಮಾತನಾಡಿದ ತುಂಬೆ ಪದವಿ ಪೂರ್ವ ಕಾಲೇಜಿನ ಹಿರಿಯ ಉಪನ್ಯಾಸಕಿ ಶರ್ಮಿಳಾ ಅವರು, ಡಾ|| ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಓರ್ವ ಸರಳ ವ್ಯಕ್ತಿತ್ವದವರಾಗಿದ್ದು, ಗ್ರಾಮೀಣ ಪ್ರದೇಶವಾದ ತುಂಬೆಯನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಮಹಾನ್ ಸಾಧಕ ಎಂದರು. ಆಕರ್ಷಕ ವ್ಯಕ್ತಿತ್ವದವರಾದ ಹಾಜಿ ಅವರು ತನ್ನ ಕುಟುಂಬ, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಹಾಗೂ ಸಾರ್ವಜನಿಕವಾಗಿ ಯಾವತ್ತೂ ಹಸನ್ಮುಖಿಯಾಗಿರುತ್ತಾ, ಎಂದೂ ಕೋಪ ತಾಪಕ್ಕೆ ಒಳಗಾಗದೆ ಅನುಕರಣೀಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡವರು ಎಂದರು.
ಸಮಾರಂಭದಲ್ಲಿ ತುಂಬ ‘ವಿದ್ಯಾ ಸಂಸ್ಥೆಗಳ ಅಧೀಕ್ಷಕ ಬಿ. ಅಬ್ದುಲ್ ಕಬೀರ್ ಪ್ರಸ್ತಾಪಿಸಿ, ನಿರೂಪಿಸಿದರು. ಧರ್ಮದರ್ಶಿಗಳಾದ ಬೀಫಾತಿಮಾ ಅಹ್ಮದ್ ಹಾಜಿ, ಮೊಹಮ್ಮದ್ ಅಶ್ರಫ್, ಪಿಟಿಎ ಅಧ್ಯಕ್ಷ ಬಶೀರ್ ತಂಡೇಲ್, ಮುಖ್ಯೋಪಾಧ್ಯಾಯನಿ ಯರಾದ ವಿದ್ಯಾ ಕೆ. ಹಾಗೂ ಮಲ್ಲಿಕಾ ಎಸ್. ಶೆಟ್ಟಿ, ಬಿ.ಎ. ಐಟಿಐ ಪ್ರಾಂಶುಪಾಲ ನವೀನ್ ಕುಮಾರ್ ಮತ್ತಿತರರು ಹಾಜರಿದ್ದರು.
ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ. ಎನ್. ಗಂಗಾಧರ ಅಳ್ವ ಸ್ವಾಗತಿಸಿ, ಅಹ್ಮದ್ ಹಾಜಿ ಅವರ ಗುಣಗಾನ ಮಾಡಿದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಪೀಠೋಪಕರಣಗಳಿಗಾಗಿ ಕೊಡುಗೆಯಾಗಿ ನೀಡಿದ ಪಿಟಿಎ ಉಪಾಧ್ಯಕ್ಷ ನಿಸಾರ್ ಅಹಮ್ಮದ್ ಅವರನ್ನು ಆಡಳಿತ ಮಂಡಳಿಯವರು ಸನ್ಮಾನಿಸಿದರು.