ಡೈಲಿ ವಾರ್ತೆ:19 ಜೂನ್ 2023
ನಾಯಿ ರೀತಿ ಬೊಗಳುವಂತೆ ಒತ್ತಾಯ: ಹಿಂದೂ ಯುವಕನಿಗೆ ಅವಹೇಳನ ಮಾಡಿದ ಮೂವರು ಅರೆಸ್ಟ್ – ಮನೆ ಧ್ವಂಸ!
(ವಿಡಿಯೋ ವೈರಲ್)
ಭೋಪಾಲ್: ಹಿಂದೂ ಯುವಕನ ಕತ್ತಿಗೆ ಹಗ್ಗ ಕಟ್ಟಿ ನಾಯಿ ರೀತಿ ಬೊಗಳುವಂತೆ ಒತ್ತಾಯಿಸಿದ್ದಲ್ಲದೇ ಆತನಿಗೆ ಥಳಿಸಿ, ಧಾರ್ಮಿಕವಾಗಿ ಅವಹೇಳನ ಮಾಡಿರುವ ಆರೋಪದ ಮೇಲೆ ಮೂವರು ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಾತ್ರವಲ್ಲದೇ ಆರೋಪಿಗಳ ಮನೆಗಳನ್ನು ಬುಲ್ಡೋಜರ್ ಹತ್ತಿಸಿ ಧ್ವಂಸಗೊಳಿಸಲಾಗಿದೆ.
ಭೋಪಾಲ್‌ನ ವ್ಯಕ್ತಿಯನ್ನು ನಾಯಿಯಂತೆ ಬೊಗಳಲು ಆದೇಶಿಸಿದ ಮೂವರನ್ನು ಸೋಮವಾರ ಕಠಿಣ ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಲಾಗಿದೆ. ಘಟನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಮೂವರು ಆರೋಪಿಗಳ ಮನೆಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ಪ್ರಾರಂಭಿಸಲಾಗುವುದು ಎಂದು ಹೇಳಿದ್ದಾರೆ.
ಘಟನೆಯೇನು?
ವಿಜಯ್ ರಾಮ್‌ಚಂದಾನಿ ಎಂಬ ಯುವಕನ ಕುತ್ತಿಗೆಗೆ ನಾಯಿಯ ಬೆಲ್ಟ್ ಹಾಕಿ, ಮೂವರು ಆರೋಪಿಗಳು ನಾಯಿಯಂತೆ ಬೊಗಳಲು ಆದೇಶಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 48 ಸೆಕೆಂಡುಗಳ ವೀಡಿಯೋದಲ್ಲಿ ಆರೋಪಿಗಳು ವ್ಯಕ್ತಿಗೆ ನಾಯಿಯಂತೆ ವರ್ತಿಸಲು ಒತ್ತಾಯಿಸಿರುವುದು ಕಂಡುಬಂದಿದೆ. ಮಾತ್ರವಲ್ಲದೇ ಆತನಿಗೆ ಥಳಿಸಿ, ಧಾರ್ಮಿಕವಾಗಿ ನಿಂದಿಸಿರುವುದಾಗಿ ಆರೋಪಿಸಲಾಗಿದೆ.
ವರದಿಗಳ ಪ್ರಕಾರ ಆರೋಪಿಗಳಾದ ಸಾಹಿಲ್ ಹಾಗೂ ಆತನ ಗ್ಯಾಂಗ್‌ನ ಸದಸ್ಯರು ವಿಜಯ್‌ಗೆ ಡ್ರಗ್ಸ್, ಮಾಂಸಾಹಾರ ಸೇವನೆ ಹಾಗೂ ಮತಾಂತರಗೊಳ್ಳುವಂತೆ ಒತ್ತಾಯಿಸಿರುವುದಾಗಿ ಆತನ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ಮಾತ್ರವಲ್ಲದೇ ಸಂತ್ರಸ್ತನಿಗೆ ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಲು ಬಲವಂತಪಡಿಸಿರುವುದಾಗಿ ಆರೋಪಿಸಿದ್ದಾರೆ. ಈ ಬಗ್ಗೆ ಆತನ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ದೂರು ದಾಖಲಿಸಿರಲಿಲ್ಲ ಎನ್ನಲಾಗಿದೆ.
ಇದೀಗ ಘಟನೆಗೆ ಸಂಬಂಧಿಸಿದ ವೀಡಿಯೋ ವೈರಲ್ ಆಗುತ್ತಲೇ ಆರೋಪಿಗಳ ಅಮಾನುಷ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಬಂಧನದ ಬಳಿಕ ಅವರ ಮನೆಯನ್ನು ಧ್ವಂಸಗೊಳಿಸುವಂತೆ ಶಿವರಾಜ್ ಸಿಂಗ್ ಚೌಹಾಣ್ ಆದೇಶಿಸಿದ್ದು, ಬುಲ್ಡೋಜರ್ ಕಾರ್ಯಚರಣೆ ಪ್ರಾರಂಭಿಸಲಾಗಿದೆ.