ಡೈಲಿ ವಾರ್ತೆ:22 ಜೂನ್ 2023

ಅಕ್ರಮವಾಗಿ ಸಾಗಿಸ್ತಿದ್ದ 16,200 ಕೆಜಿ ಅಕ್ಕಿ ವಶಕ್ಕೆ

ಕಲಬುರಗಿ: ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಉಚಿತ ನೀಡಲು ಸರ್ಕಾರ ಹೆಣಗಾಡುತ್ತಿದ್ದರೆ. ಪ್ರತಿ ಪಕ್ಷ ನಾಯಕರು ಕಾಂಗ್ರೆಸ್‌ ಗ್ಯಾರಂಟಿ ಘೋಷಣೆ ಮಾಡಿದಂತೆ ಅಕ್ಕಿ ಕೊಡಲೇಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ನಡುವೆ ಅಕ್ರಮವಾಗಿ ಸಾಗಿಸುತ್ತಿದ್ದ 16,200 ಕೆಜಿ ಪಡಿತರ ಅಕ್ಕಿಯನ್ನ ಜಿಲ್ಲೆಯ ಆಳಂದ ತಾಲೂಕಿನ ಪೋಲಿಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 16,200 ಕೆಜಿ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಆಳಂದ ಪಟ್ಟಣದಿಂದ ನೆರೆಯ ಮಹಾರಾಷ್ಟ್ರ ರಾಜ್ಯಕ್ಕೆ ಹೋಗುತ್ತಿದ್ದ ಟಾಟಾ ಟರ್ಬೋ ವಾಹನದಲ್ಲಿ 12,460 ಕೆಜಿ ಹಾಗೂ ಆಳಂದ ಪಟ್ಟಣದ ವಿದ್ಯಾನಗರ ಗೋಡೌನ್‌ನಲ್ಲಿದ್ದ 3,740 ಕೆಜಿ ಅಕ್ಕಿಯನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ವಾಹನ ಚಾಲಕರನ್ನೂ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ದಂಧೆಯ ಹಿಂದೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಇರುವ ಶಂಕೆ ವ್ಯಕ್ತವಾಗಿದೆ. ಕಳೆದ ಎರಡು ದಿನದ ಹಿಂದೆ ಕಲಬುರಗಿಯಲ್ಲೂ 23 ಸಾವಿರ ಕೆಜಿ ಅಕ್ಕಿಯನ್ನ ಆಹಾರ ಇಲಾಖೆ ವಶಪಡಿಸಿಕೊಂಡಿತ್ತು.

ಸಿಎಂ ಹೇಳಿರೋದೇನು?
ಈಗಾಗಲೇ ಜುಲೈ 1 ರಿಂದ ಅನ್ನಭಾಗ್ಯ ಯೋಜನೆ ಜಾರಿ ಅನುಮಾನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅಕ್ಕಿ ಹೊಂದಿಸಲು ಬೇರೆ ಬೇರೆ ರಾಜ್ಯಗಳ ಜೊತೆಗೆ ಮಾತುಕತೆ ನಡೆಸಲಾಗುತ್ತಿದೆ. ಯಾವ ರಾಜ್ಯಗಳಲ್ಲೂ ಬೇಡಿಕೆ ಇರುವಷ್ಟು ಸಾಮರ್ಥ್ಯದಲ್ಲಿ ಪೂರೈಕೆಯಾಗದ ಹಿನ್ನೆಲೆ ಯೋಜನೆ ಜಾರಿ ಮಾಡುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.