ಡೈಲಿ ವಾರ್ತೆ:22 ಜೂನ್ 2023

ವಿದ್ಯಾರ್ಥಿ ಸಮುದಾಯ ದೇಶದ ಸ್ವಾಸ್ತ್ಯವನ್ನು ಹಾಳು ಮಾಡದೇ ದೇಶದ ಆಸ್ತಿಯಾಗಿ ಬಾಳಿ: ಸಬ್‌ಇನ್ಸ್‌ಪೆಕ್ಟರ್‌ ರಾಜಶೇಖರ ವಂದಲಿ

ವಿದ್ಯಾರ್ಥಿ ಸಮುದಾಯ ದೇಶದ ಸ್ವಾಸ್ತ್ಯವನ್ನು ಹಾಳು ಮಾಡದೇ ದೇಶದ ಆಸ್ತಿಯಾಗಿ ಬಾಳಿ ಎಂದು ಬ್ರಹ್ಮಾವರ ಪೊಲೀಸ್‌ ಠಾಣೆಯ ಸಬ್‌ಇನ್ಸ್‌ಪೆಕ್ಟರ್‌ ರಾಜಶೇಖರ ವಂದಲಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಬ್ರಹ್ಮಾವರದ ಕ್ರಾಸ್‌ಲ್ಯಾಂಡ್‌ ಕಾಲೇಜಿನಲ್ಲಿ ಗುರುವಾರ ಉಡುಪಿ ಜಿಲ್ಲಾ ಪೊಲೀಸ್‌ ಬ್ರಹ್ಮಾವರ ಪೊಲೀಸ್‌ ಠಾಣೆಯ ಸಹಯೋಗದಲ್ಲಿ ಮಾದಕ ದ್ರವ್ಯ ವಿರೋಧಿ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶೈಕ್ಷಣಿಕ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯಗಳಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದಾದ್ಯಂತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂಟರ್‌ನೆಟ್‌, ಮೊಬೈಲ್‌ಗಳ ಮೂಲಕ ಸಿಗುವ ಮಾಹಿತಿ ಮತ್ತು ವಿದ್ಯಾರ್ಥಿಗಳಲ್ಲಿರುವ ಕುತೂಹಲ ದೃಷ್ಟಿ ವಿದ್ಯಾರ್ಥಿಗಳು ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅತಿಯಾದ ಸಿಟ್ಟು, ಸ್ವಭಾವದಲ್ಲಿ ವ್ಯತ್ಯಾಸವಾದಲ್ಲಿ ಪೋಷಕರು ಜಾಗೃತರಾಗಿ ಮಕ್ಕಳ ಬಗ್ಗೆ ಕಾಳಜಿ ವಹಿಸಿದಲ್ಲಿ ಇಂತಹ ದುಶ್ಚಟಗಳಿಗೆ ಬಲಿಯಾಗುವುದನ್ನು ತಪ್ಪಿಸಬಹುದು. ವಿದ್ಯಾರ್ಥಿಗಳು ಇಂತಹ ಕೃತ್ಯ ಎಸಗುವವರ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಸಮೀಪದ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ಬ್ರಹ್ಮಾವರ ಠಾಣೆಯ ಸಬ್‌ ಇನ್ಸ್‌ ಪೆಕ್ಟರ್‌ ಪುಷ್ಪಾ ಮಾತನಾಡಿ ಹಿಂದೆ ಬಡತನ, ಆನಾರೋಗ್ಯ, ಅನಕ್ಷರಸ್ಥರಂತಹ ಸಾಮಾಜಿಕ ಪಿಡುಗು ಇಂದು ಮಾದಕ ದ್ರವ್ಯಗಳಿಂದ ಸಾಮಾಜಿಕ ಪಿಡುಗು ಕಾಡುತ್ತಿದೆ. ವಿದ್ಯಾರ್ಥಿಗಳು ಯಾವುದೇ ಉದ್ವೇಗಕ್ಕೆ ಒಳಗಾಗದೇ ತಮ್ಮ ಜೀವನವನ್ನು ಸರಿಯಾಗಿದೂಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಜಾನ್ಸನ್‌ ಜೇಕಬ್‌ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾವರ ಪೊಲೀಸ್‌ ಠಾಣೆಯ ಸಿಬ್ಬಂದಿಗಳಾದ ದಿಲೀಪ್‌, ಸುರೇಶ್‌ ಬಾಬು, ಪ್ರಶಾಂತ್‌ ಇದ್ದರು.
ಉಪನ್ಯಾಸಕ ನವೀನ್‌ ಕುಮಾರ್‌ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿನಿ ತುಳಸಿ ವಂದಿಸಿದರು.