ಡೈಲಿ ವಾರ್ತೆ:22 ಜೂನ್ 2023

ಮರಣೋತ್ತರ ಪರೀಕ್ಷೆಯ ವೇಳೆ ಎದ್ದು ಕುಳಿತ ಬಾಲಕಿ: ಬೆಚ್ಚಿ ಬಿದ್ದ ವೈದ್ಯರು

ಉತ್ತರ ಪ್ರದೇಶ: ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ ಎಂದು ಮರಣೋತ್ತರ ಪರೀಕ್ಷೆ ನಡೆಸಲು ತಯಾರಿ ನಡೆಸುವ ವೇಳೆ ಬಾಲಕಿ ಕಣ್ಣು ಬಿಟ್ಟು ಎದ್ದು ಕುಳಿತ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ನಡೆದಿದೆ.

ಜೂನ್ 18 ರಂದು ತನ್ನ ಮನೆಯ ಸಮೀಪದ ನದಿಯೊಂದರಲ್ಲಿ ಬಾಲಕಿಯೊಬ್ಬಳು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಅಲ್ಲದೆ ಬಾಲಕಿಯ ಪೋಷಕರಿಗೂ ಮಾಹಿತಿ ನೀಡಲಾಗಿದೆ ವಿಚಾರ ತಿಳಿದ ಕೂಡಲೇ ಬಾಲಕಿಯ ಪೋಷಕರು ನದಿಯ ಬಳಿ ತೆರಳಿ ಬಾಲಕಿಯನ್ನು ನದಿಯಿಂದ ಮೇಲಕೆತ್ತಿದ್ದಾರೆ, ಈ ವೇಳೆಗಾಗಲೇ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಬಾಲಕಿಯನ್ನು ನೀರಿನಿಂದ ಮೇಲಕ್ಕೆತ್ತಿದ್ದ ವೇಳೆ ಬಾಲಕಿ ಉಸಿರಾಡುತ್ತಿಲ್ಲ ಹಾಗಾಗಿ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ. ಆದರೆ ಇದರಿಂದ ಸಮಾಧಾನಗೊಳ್ಳದ ಪೋಷಕರು ಮಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಕೇಳಿಕೊಂಡಿದ್ದಾರೆ ಆದರೆ ಇದಕ್ಕೆ ಒಪ್ಪದ ಪೊಲೀಸರು ಮಗಳ ಮರಣೋತ್ತರ ಪರೀಕ್ಷೆ ನಡೆಸಲು ಬಾಲಕಿಯ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಆಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ನಡೆಸಲು ತಯಾರಿ ನಡೆಸುತ್ತಿದ್ದ ವೈದ್ಯರು ಬಾಲಕಿಯ ನಾಡಿ ಮಿಡಿತ ಪರೀಕ್ಷೆ ನಡೆಸಿದಾಗ ಬಾಲಕಿ ಬದುಕಿರುವುದು ಗೊತ್ತಾಗಿದೆ ಅಲ್ಲದೆ ಸ್ವಲ್ಪ ಹೊತ್ತಿನಲ್ಲೇ ಬಾಲಕಿ ಕಣ್ಣು ಬಿಟ್ಟು ಎದ್ದು ಕೂತಿದ್ದಾಳೆ, ಇದನ್ನು ಕಂಡ ವೈದ್ಯರು ಒಮ್ಮೆ ಗಾಬರಿಗೊಂಡಿದ್ದಾರೆ ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.

ತನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ನಂಬಿದ್ದ ಪೋಷಕರಿಗೆ ಮಗಳು ಬದುಕಿರುವ ವಿಚಾರ ವೈದ್ಯರು ತಿಳಿಸುತ್ತಿದ್ದಂತೆ ಇದು ಮಗಳ ಪುನರ್ಜನ್ಮ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಬಾಲಕಿ ಆರೋಗ್ಯವಾಗಿದ್ದು ವೈದ್ಯರು ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಟ್ಟಿದ್ದಾರೆ.