ಡೈಲಿ ವಾರ್ತೆ: 26 ಜೂನ್ 2023
ಮಂಗನಿಂದ ಬೆಳೆ ಕಾಪಾಡಿಕೊಳ್ಳಲು ಕರಡಿಯ ವೇಷ ಧರಿಸಿದ ರೈತರು!
ಲಕ್ಕೋ: ರೈತರಿಗೆ ಬೆಳೆ ಬೆಳೆಯುವುದು ಕಾಯಕವಾದರೆ ಅದನ್ನು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದು ಅದಕ್ಕಿಂತ ದೊಡ್ಡ ಕೆಲಸ. ಪ್ರಾಣಿಗಳು ಹೆದರಿ ಹೊಲಕ್ಕೆ ಬಾರದಿರಲಿ ಎಂದೇ ದೊಡ್ಡ ದೊಡ್ಡ ಗೊಂಬೆಗಳನ್ನು ಹೊಲದೊಳಗೆ ನಿಲ್ಲಿಸಿರುವುದನ್ನು ನೀವು ನೋಡಿರುತ್ತೀರಿ. ಆದರೆ ಇದೀಗ ಉತ್ತರ ಪ್ರದೇಶದಲ್ಲಿ ಈ ಎಲ್ಲ ಟ್ರಿಕ್ಸ್ ಗಳು ಮಂಗಗಳಿಗೆ ಗೊತ್ತಾಗಿಬಿಟ್ಟಿವೆ.
ಹಾಗಾಗಿ ಮನುಷ್ಯರೇ ಕರಡಿಗಳಾಗಿ ತಮ್ಮ ಬೆಳೆ ಕಾಪಾಡಿಕೊಳ್ಳಬೇಕಾದ ಸ್ಥಿತಿ ಬಂದೊದಗಿದೆ.
ಉತ್ತರ ಪ್ರದೇಶದ ಲಖೀಂಪುರ ಖೇರಿಯ ಜಹಾನ್ ನಗರ ಗ್ರಾಮದಲ್ಲಿ ರೈತರು ಹೆಚ್ಚಾಗಿ ಕಬ್ಬು ಬೆಳೆ ಬೆಳೆಯುತ್ತಿದ್ದಾರೆ. ಆದರೆ ಅಲ್ಲಿ ಸುಮಾರು 45-50 ಮಂಗಗಳ ದಂಡಿದ್ದು, ಅವು ಸದಾ ರೈತರ ಹೊಲಗಳಿಗೆ ನುಗ್ಗಿ ಬೆಳೆ ಹಾಳು ಮಾಡುತ್ತಿವೆಯಂತೆ. ಈ ವಿಚಾರವಾಗಿ ರೈತರು ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ಕೊಟ್ಟದ್ದೂ ಆಗಿದೆ. ಆದರೆ ಸರ್ಕಾರದಿಂದ ಯಾವುದೇ ನೆರವು ಬಾರದ ಹಿನ್ನೆಲೆ ರೈತರೇ ಇದಕ್ಕೊಂದು ಉಪಾಯ ಮಾಡಿದ್ದಾರೆ.
ರೈತರೆಲ್ಲರು ಒಟ್ಟಾಗಿ ನಾಲ್ಕು ಸಾವಿರ ರೂ. ಸಂಗ್ರಹಿಸಿ ಕರಡಿಯಂತೆ ಕಾಣುವ ಬಟ್ಟೆ ಖರೀದಿಸಿದ್ದಾರೆ. ಅದನ್ನು ಹಾಕಿಕೊಂಡು ಹೊಲಗಳಲ್ಲಿ ಓಡಾಡುತ್ತಿರುತ್ತಾರೆ. ಹೊಲದಲ್ಲಿ ಕರಡಿಯನ್ನು ಕಾಣುತ್ತಿರುವ ಮಂಗಗಳು ಹೊಲಕ್ಕೆ ಬರುತ್ತಿಲ್ಲವಂತೆ.
ಈ ವಿಚಾರ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆಯೇ ಸರ್ಕಾರ ಎಚ್ಚೆತ್ತುಕೊಂಡಿದೆ. ಗ್ರಾಮದ ರೈತರ ಸಮಸ್ಯೆಯನ್ನು ಆಲಿಸಿ ಅದಕ್ಕೆ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳಬಹುದು ಎನ್ನುವುದರ ಬಗ್ಗೆ ಗಮನ ಹರಿಸುತ್ತೇವೆ ಎಂದು ಸ್ಥಳೀಯ ವಿಭಾಗೀಯ ಅರಣ್ಯಾಧಿಕಾರಿ ತಿಳಿಸಿದ್ದಾರೆ.