ಡೈಲಿ ವಾರ್ತೆ:28 ಜೂನ್ 2023
ಹುಬ್ಬಳ್ಳಿಯಲ್ಲಿ ತಪ್ಪಿತು ದೊಡ್ಡ ದುರಂತ:ನೆಲಕ್ಕೆ ಅಪ್ಪಳಿಸಿದ ಬೃಹತ್ ಗಾತ್ರದ ಕಬ್ಬಿಣದ ಕಂಬ!
ಹುಬ್ಬಳ್ಳಿ: ರೈಲ್ವೇ ಇಲಾಖೆ ಆಲಸ್ಯವೋ ಅಥವಾ ನಿರ್ಲಕ್ಷ್ಯವೋ ಗೊತ್ತಿಲ್ಲ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.
ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ- ಗದಗ ಎನ್‌ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಹುಬ್ಬಳ್ಳಿಯ ರೈಲ್ವೇ ನಿಲ್ದಾಣದ ಬಳಿ ಬೃಹತ್ ಗಾತ್ರದ ಕಬ್ಬಿಣದ ಕಂಬ ನೆಲಕ್ಕೆ ಅಪ್ಪಳಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮಧ್ಯಾಹ್ನ 12:30ರ ವೇಳೆಗೆ ಕಂಬ ಉರುಳಿ ಬೀಳುತ್ತಿರುವ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೇತುವೆ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಹಾಕಲಾಗಿದ್ದ ಕಬ್ಬಿಣದ ಬೃಹತ್ ಕಂಬ, ತುಕ್ಕು ಹಿಡಿದು ತನ್ನಷ್ಟಕ್ಕೆ ತಾನೆ ನೆಲಕ್ಕೆ ಬಿದ್ದಿದೆ. ಕಳೆದ ಮೂರು ತಿಂಗಳ ಹಿಂದೆ ಈ ರೀತಿಯ ದುರ್ಘಟನೆ ನಡೆದಿತ್ತು. ಆದರೂ ಎಚ್ಚೆತ್ತುಕೊಳ್ಳದ ರೇಲ್ವೆ ಇಲಾಖೆಯ ಅಧಿಕಾರಿಗಳು ಮತ್ತೊಮ್ಮೆ ನಿರ್ಲಕ್ಷ್ಯ ತೋರಿಸಿದ್ದಾರೆ.
ಬಸ್, ಕಾರು, ದ್ವಿಚಕ್ರ ವಾಹನಗಳು ಹೋದ ಕೆಲವೇ ಕ್ಷಣಗಳಲ್ಲಿ ಕಂಬ ಉರುಳಿಬಿದ್ದಿದೆ. ಒಂದು ವೇಳೆ ಬಸ್ ಅಥವಾ ಕಾರು ಮೇಲೆ ಬಿದ್ದಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು.