ಡೈಲಿ ವಾರ್ತೆ: 29 ಜೂನ್ 2023
ಬಕ್ರೀದ್ ಆಚರಣೆ:ಮುಸ್ಲಿಂ ಬಾಂಧವರ ಸಾಮೂಹಿಕ ಪ್ರಾರ್ಥನೆಯಲ್ಲಿ ಸಿದ್ದರಾಮಯ್ಯ ಭಾಗಿ
ಬೆಂಗಳೂರು: ಪವಿತ್ರ ಬಕ್ರೀದ್ ಹಬ್ಬ ಆಚರಣೆ ಹಿನ್ನೆಲೆಯಲ್ಲಿ ನಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.
ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರೂ ಭಾಗಿಯಾಗಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯರನ್ನ ಮುಸ್ಲಿಂ ಧರ್ಮಗುರುಗಳು ತಮ್ಮ ಸಂಪ್ರದಾಯದಂತೆ ಟೋಪಿ ಹಾಕಿ ಬರಮಾಡಿಕೊಂಡರು. ಇದೇ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಪುಸ್ತಕ ನೀಡಿ ಸ್ವಾಗತಿಸಿದರು. ಸಾವಿರಾರು ಸಂಖ್ಯೆಯ ಮುಸ್ಲಿಂ ಬಾಂಧವರು ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಅಲ್ಲಾ ಕೃಪೆಗೆ ಪಾತ್ರರಾದರು.
ನಂತರ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯ ಕೋರಿದ ಸಿಎಂ, ಇಂದು ಪ್ರಾರ್ಥನೆ ಮಾಡಿ ಮನುಕುಲಕ್ಕೆ ಒಳಿತಾಗಲೆಂದು ಕೇಳಿಕೊಂಡಿದ್ದೀರಿ. ಈ ಹಬ್ಬದ ದಿನ ಮುಸ್ಲಿಂ ಬಾಂಧವರೆಲ್ಲ ಸೇರಿದ್ದೀರಿ, ನಾನೂ ನಿಮ್ಮೊಂದಿಗೆ ಭಾಗಿಯಾಗಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.
ನಾವೆಲ್ಲರೂ ಮನುಷ್ಯರು ಪರಸ್ಪರ ಪ್ರೀತಿಯಿಂದ ಇರಬೇಕು. ನಮ್ಮಲ್ಲೇ ಕೆಲ ಶಕ್ತಿಗಳಿವೆ, ಇದಕ್ಕೆ ಅಡ್ಡಿಪಡಿಸಲು ಪ್ರಯತ್ನ ಮಾಡುತ್ತಿವೆ. ಅವುಗಳಿಗೆ ಸೊಪ್ಪು ಹಾಕಬಾರದು. ಎಲ್ಲಾ ಪ್ರೀತಿಯಿಂದ ಇದ್ದರೆ, ರಾಜ್ಯವೂ ಅಭಿವೃದ್ಧಿಯಾಗುತ್ತೆ. ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಸಲಹೆ ನೀಡಿದರು.