



ಡೈಲಿ ವಾರ್ತೆ:01 ಜುಲೈ 2023


ಮಹಾರಾಷ್ಟ್ರದಲ್ಲಿ ಭೀಕರ ಬಸ್ ದುರಂತ – 25 ಮಂದಿ ಸಜೀವ ದಹನ
ಮುಂಬೈ: ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡು ಮೂರು ಮಕ್ಕಳು ಸೇರಿದಂತೆ 25 ಜನರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ಅವಘಡದಲ್ಲಿ ಎಂಟು ಜನರು ಗಾಯಗೊಂಡಿದ್ದಾರೆ.
ಪುಣೆಗೆ ತೆರಳುತ್ತಿದ್ದ ಬಸ್‌ನಲ್ಲಿ ಸುಮಾರು 33 ಮಂದಿ ಇದ್ದರು. ಸಮೃದ್ಧಿ-ಮಹಾಮಾರ್ಗ್ ಎಕ್ಸ್‌ಪ್ರೆಸ್‌ವೇಯಲ್ಲಿ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಲ್ಧಾನಾ ಬಳಿ ಟೈರ್ ಬ್ಲಾಸ್ಟ್ ಆಗಿ ನಿಯಂತ್ರಣ ತಪ್ಪಿದ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿತು. ಅವಘಡದಲ್ಲಿ 25 ಜನರು ಸುಟ್ಟು ಕರಕಲಾಗಿದ್ದು, ಬಸ್ ಚಾಲಕ ಸೇರಿದಂತೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಬುಲ್ಧಾನದ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಕಡಸನೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಶವಗಳ ಗುರುತು ಪತ್ತೆ ಮಾಡಿ, ಅವರ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.