ಡೈಲಿ ವಾರ್ತೆ:01 ಜುಲೈ 2023
ತಡವಾಗಿ ಬಂದ ಸರ್ಕಾರಿ ಬಸ್: ಅಡ್ಡಗಟ್ಟಿ ಡ್ರೈವರ್‌ಗೆ ಕ್ಲಾಸ್ ತೆಗೆದುಕೊಂಡ ಮಹಿಳೆಯರು
ಚಿಕ್ಕಮಗಳೂರು: ತಡವಾಗಿ ಬಂದ ಸರ್ಕಾರಿ ಬಸ್ಸನ್ನ ರಸ್ತೆ ಮಧ್ಯದಲ್ಲೇ ಅಡ್ಡಗಟ್ಟಿದ ಕಾರ್ಮಿಕ ಮಹಿಳೆಯರು ಡ್ರೈವರ್‌ಗೆ ಕ್ಲಾಸ್ ತೆಗೆದುಕೊಂಡ ಘಟನೆ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ತಡರಾತ್ರಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಿಂದ ನೂರಾರು ಮಹಿಳೆಯರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾಫಿ ತೋಟಗಳಿಗೆ ಕೆಲಸಕ್ಕೆ ಬಂದಿದ್ದರು. ಸಂಜೆ ಕೆಲಸ ಮುಗಿಸಿಕೊಂಡು ಊರಿಗೆ ತೆರಳಲು ಸಂಜೆ 4:30ರ ವೇಳೆಗೆ ಮೂಡಿಗೆರೆ ತಾಲೂಕಿನ ಹ್ಯಾಂಡ್‍ಪೋಸ್ಟ್‌ಗೆ ಬಂದರು. ಆದ್ರೆ ಬಸ್ ಬರುವ ಹೊತ್ತಿಗೆ ರಾತ್ರಿ 8:30 ಆಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆಯರು ರಸ್ತೆ ಮಧ್ಯದಲ್ಲೇ ಬಸ್‍ಗೆ ಅಡ್ಡಗಟ್ಟಿ ಡ್ರೈವರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೆಚ್ಚುವರಿ ಬಸ್ ಸೌಲಭ್ಯವಿಲ್ಲದ್ದರಿಂದ ಸಕಲೇಶಪುರ ಬಸ್‌ನಲ್ಲಿ ಮೂಡಿಗೆರೆ ತಾಲೂಕಿನ ಜನ್ನಾಪುರ ಗ್ರಾಮದವರೆಗೆ ಒಂದು ಬಸ್ಸಿನಲ್ಲಿ ಹೋಗಿ, ಅಲ್ಲಿಂದ ಮತ್ತೊಂದು ಬಸ್ ಹಿಡಿದು ಬೇಲೂರು ತಲುಪಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಸರ್ಕಾರಿ ಬಸ್ ನಿಲ್ಲಿಸಿಲ್ಲ ಎಂದು ಮಹಿಳೆಯರು ಸರ್ಕಾರಿ ಬಸ್ ಚಾಲಕ ಹಾಗೂ ನಿರ್ವಾಹಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಳಸ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ ಉತ್ತರ ಕರ್ನಾಟಕದ ಗದಗ ಹಾಗೂ ಬಾಗಲಕೋಟೆಯಿಂದ 40ಕ್ಕೂ ಹೆಚ್ಚು ಮಹಿಳೆಯರು ಫ್ರೀ ಬಸ್ಸಿನಲ್ಲಿ ಪ್ರವಾಸಕ್ಕೆ ಬಂದಿದ್ದರು. ಕಳಸದವರೆಗೆ ಖಾಸಗಿ ಬಸ್‍ನಲ್ಲಿ ಬಂದ ಮಹಿಳೆಯರು ಹೊರನಾಡಿಗೆ ಹೋಗಲು ಸರ್ಕಾರಿ ಬಸ್ ಕಾಯುತ್ತಿದ್ದರು. ಆದರೆ, ರಾತ್ರಿ 8.30ಕ್ಕೆ ಬಂದ ಸರ್ಕಾರಿ ಬಸ್ ನಿಲ್ಲಿಸದೇ ಹೋಗಿದ್ದರಿಂದ ಮಹಿಳೆಯರು ಸರ್ಕಾರಿ ಚಾಲಕನ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಆ ಕಂಡಕ್ಟರ್ ಬರೀ ಸುಳ್ಳು ಹೇಳಿಕೊಂಡು ಬಸ್ ನಿಲ್ಲಿಸದೇ ಹೋಗಿದ್ದಾನೆ. ಆ ಕಂಡಕ್ಟರನ್ನ ಹಿಡ್ಕೊಂಡು ನಾಲ್ಕು ಬಡೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾವು ಬರೀ ಹೆಣ್ಣು ಮಕ್ಕಳೇ ಬಂದಿದ್ದೇವೆ, ಮಕ್ಕಳು-ಮರಿ ಇದ್ದಾವೆ. ಇಲ್ಲಿ ಊಟಕ್ಕೂ ಏನೂ ಇಲ್ಲ. ಕುಡಿಯೋಕೆ ನೀರಿಲ್ಲ. ಆದ್ರೂ ಅವನು ಬಸ್ ನಿಲ್ಲಿಸದೇ ಹೋಗಿದ್ದಾನೆ ಎಂದು ಕಿಡಿಕಾರಿದ್ದಾರೆ.