ಡೈಲಿ ವಾರ್ತೆ:01 ಜುಲೈ 2023

ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ದಾಳಿ ಮಾಡಿದ್ದ ನಾಲ್ವರ ಬಂಧನ

ಲಕ್ನೋ: ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಮೇಲೆ ದಾಳಿ ಮಾಡಿದ್ದ ನಾಲ್ವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತನರನ್ನು ಹರಿಯಾಣದ ವಿಕಾಸ್ ಹಾಗೂ ಉತ್ತರಪ್ರದೇಶದ ಪ್ರಶಾಂತ್, ಲೋವಿಶ್ ಮತ್ತು ವಿಕಾಸ್ ಎಂದು ಗುರುತಿಸಲಾಗಿದೆ. ಇವರನ್ನು ಹರಿಯಾಣ ಹಾಗೂ ಉತ್ತರಪ್ರದೇಶದ ಪೊಲೀಸರು ಕಾರ್ಯಚರಣೆ ನಡೆಸಿ ಬಂಧಿಸಿದ್ದಾರೆ.

ಈ ನಾಲ್ವರನ್ನು ಹರಿಯಾಣದ ಅಂಬಾಲ ಜಿಲ್ಲೆಯ ಶಹಜಾದ್‍ಪುರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಉಪಪೊಲೀಸ್ ಆಯುಕ್ತ ಅಮನ್ ಕುಮಾರ್ ತಿಳಿಸಿದ್ದಾರೆ. ಸದ್ಯ ಬಂಧಿತ ನಾಲ್ವರನ್ನು ಉತ್ತರಪ್ರದೇಶದ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆದಿಲ್ಲ ಎಂದಿದ್ದಾರೆ.

ಘಟನೆ ವಿವರ:ಚಂದ್ರಶೇಖರ್ ಆಜಾದ್ ಅವರು ಜೂನ್ 28ರಂದು ಸಂಜೆ ಖಾಸಗಿ ಕಾರ್ಯಕ್ರಮ ಮುಗಿಸಿಕೊಂಡು ಸಹೋದರ ಹಾಗೂ ಇತರೆ ಮೂವರ ಜೊತೆ ಕಾರಿನಲ್ಲಿ ಹೊರಟಿದ್ದರು. ಅಂತೆಯೇ ಉತ್ತರಪ್ರದೇಶದ ಸಹರನ್‍ಪುರ ಜಿಲ್ಲೆಯಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಕಾರಿನಲ್ಲಿ ಬಂದವರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಪರಿಣಾಮ ಆಜಾದ್ ಹೊಟ್ಟೆಯ ಭಾಗಕ್ಕೆ ಗುಂಡೇಟು ತಗುಲಿತ್ತು. ಅಲ್ಲದೆ ಗುಂಡುಗಳು ಕಾರಿನ ಸೀಟುಗಳ ಮೇಲೆ ಬಿದ್ದಿವೆ. ದಾಳಿ ನಡೆಸಿದವರು ತಮ್ಮ ಕಾರನ್ನು ಹಿಮ್ಮುಖವಾಗಿ ಚಲಿಸಿಕೊಂಡು ಪರಾರಿಯಾಗಿದ್ದರು. ಗಾಯಗೊಂಡು ಅಪಾಯದಿಂದ ಪಾರಾಗಿದ್ದ ಆಜಾದ್ ಅವರನ್ನು ಕೂಡಲೇ ಸಹರನ್‍ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.