ಡೈಲಿ ವಾರ್ತೆ:02 ಜುಲೈ 2023

ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಮಧ್ಯರಾತ್ರಿ
ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ:ವಾಹನ ಚಾಲಕರೇ ಎಚ್ಚರ

ಮಂಡ್ಯ: ಸಾಲು ಸಾಲು ಅಪಘಾತಗಳಿಂದ ಕಿಲ್ಲರ್ ಎಕ್ಸ್ಪ್ರೆಸ್ವೇ ಎಂಬ ಕುಖ್ಯಾತಿ ಪಡೆದಿರುವ ಬೆಂಗಳೂರು-ಮೈಸೂರು ಹೆದ್ದಾರಿ ಇದೀಗ ಮತ್ತೊಂದು ಅಪಖ್ಯಾತಿಗೆ ಗುರಿಯಾಗಿದೆ.

ಈ ಹೆದ್ದಾರಿ, ದರೋಡೆಕೋರರ ಅಡ್ಡೆಯಾಗಿರುವ ಮಾತುಗಳು ಕೇಳಿಬರುತ್ತಿವೆ. ಹೌದು, ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರು ಎಚ್ಚರವಹಿಸಬೇಕಿದೆ. ನಿದ್ದೆ ಅಂತ ಮಧ್ಯರಾತ್ರಿಯಲ್ಲಿ ಅಪ್ಪಿ-ತಪ್ಪಿ ಕಾರು ನಿಲ್ಲಿಸಿದರೆ ನಿಮ್ಮ ಕತೆ ಮುಗೀತು ಅಂತಾನೇ ಅರ್ಥ. ಮಂಡ್ಯದಲ್ಲಿ ಹೆದ್ದಾರಿಯಲ್ಲಿ ದರೋಡೆ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಎಡಿಜಿಪಿ ಭೇಟಿ ದಿನವೇ ಘಟನೆ:
‌ಮೊನ್ನೆಯಷ್ಟೆ ಎಡಿಜಿಪಿ ಅಲೋಕ್ ಕುಮಾರ್ ಅವರು ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಪರಿಶೀಲನೆ ನಡೆಸಿದರು. ಹೆದ್ದಾರಿಯ ನ್ಯೂನತೆ, ಅಪಘಾತ ಹಾಗೂ ಕ್ರೈಂ ಪ್ರಕರಣಗಳಿಗೆ ಕಡಿವಾಣ ಹಾಕಲು ಎಡಿಜಿಪಿ ಸೂಚನೆ ನೀಡಿದ್ದರು. ಆದರೆ, ಎಡಿಜಿಪಿ ಬಂದು ಹೋದ ದಿನವೇ ದರೋಡೆ ನಡೆದಿದೆ.

ಚಿನ್ನದ ಸರ ಕಿತ್ತು ಕೊಂಡ ಕಿರಾತಕರು:
ಪೊಲೀಸರೆಂದು ಹೇಳಿಕೊಂಡು ಕಿರಾತಕರು ಕಾರು ಅಡ್ಡ ಹಾಕಿ, ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಿದ್ದಾರೆ. ಈ ಘಟನೆ ಮಂಡ್ಯದ ಮದ್ದೂರಿನ ಐಶ್ವರ್ಯ ಕಾನ್ವೆಂಟ್ ಬಳಿಯ ಹೆದ್ದಾರಿಯಲ್ಲಿ ನಡೆದಿದೆ. ಮಡಿಕೇರಿ ಮೂಲದ ಯುವಕ ಮುತ್ತಪ್ಪ ಎಂಬುವವರ ಕಾರು ಅಡ್ಡ ಹಾಕಿ, ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು, ಚಿನ್ನದ ಸರವನ್ನು ಕಿರಾತಕರು ಕಿತ್ತುಕೊಂಡಿದ್ದಾರೆ.

ಪೊಲೀಸರು ಎಂದು ಧಮ್ಕಿ:
ಸುಮಾರು 3.50 ಲಕ್ಷ ರೂ. ಮೌಲ್ಯದ 65 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಮುತ್ತಪ್ಪ ಅವರು ಬೆಂಗಳೂರಿನಿಂದ ಮಡಿಕೇರಿಗೆ ಇನೋವಾ ಕ್ರಿಸ್ಟಾ ಕಾರಿನಲ್ಲಿ ತೆರಳುತ್ತಿದ್ದರು. ಮಧ್ಯರಾತ್ರಿ 2 ಗಂಟೆಯಲ್ಲಿ ಸರ್ವಿಸ್ ರಸ್ತೆಯಲ್ಲಿ ಕಾರನ್ನ ನಿಲ್ಲಿಸಿ ವಿಶ್ರಾಂತಿ ಪಡೆಯುವ ವೇಳೆ ಮೂವರು ದುಷ್ಕರ್ಮಿಗಳು ನಾವು ಪೊಲೀಸರು ಎಂದು ಧಮ್ಕಿ ಹಾಕಿ ದರೋಡೆ ಮಾಡಿದ್ದಾರೆ.
ತಪಾಸಣೆಯ ನೆಪವೊಡ್ಡಿ ಮಾರಕಾಸ್ತ್ರವನ್ನು ಕುತ್ತಿಗೆಗೆ ಇಟ್ಟು ಗಾಯಗೊಳಿಸಿ ದರೋಡೆ ಮಾಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಹೆದ್ದಾರಿ ಗಸ್ತು ಪೊಲೀಸರು ಆಗಮಿಸಿ, ಮುತ್ತಪ್ಪ ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.