ಡೈಲಿ ವಾರ್ತೆ:02 ಜುಲೈ 2023

ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚನೆ: ಗ್ಯಾಂಗ್ ಅರೆಸ್ಟ್

ಯಾದಗಿರಿ: ಸಾಲ ಕೊಡಿಸುವುದಾಗಿ ನಂಬಿಸಿ ಜನರಿಂದ ಹಣ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಯಾದಗಿರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಂತೋಷ್, ಪಾಂಡು ಹಾಗೂ ಮೆಹಬೂಬ್ ಎಂದು ಗುರುತಿಸಲಾಗಿದೆ.

ಆರೋಪಿಗಳು ಸಾಲ ಕೊಡಿಸುವುದಾಗಿ ಜನರಿಂದ ಮುಂಗಡವಾಗಿ ಒಂದು ವರ್ಷದ ಬಡ್ಡಿ ಹಣವನ್ನು ಪಡೆಯುತ್ತಿದ್ದರು. ಆದರೆ ಸಾಲವನ್ನು ಕೊಡಿಸುತ್ತಿರಲಿಲ್ಲ. ಕೊಟ್ಟ ಹಣವನ್ನು ಜನ ವಾಪಾಸ್ ಕೇಳಿದರೆ ಮಹಿಳೆಯರನ್ನು ಬಳಕೆ ಮಾಡಿಕೊಂಡು ಕೇಸ್ ಹಾಕುವ ಬೆದರಿಕೆ ಹಾಕುತ್ತಿದ್ದರು. ಆರೋಪಿಗಳು 80,000 ರೂ. ಹಾಗೂ ದಾಖಲಾತಿ ಚಾರ್ಜ್ ಎಂದು 16,000 ರೂ ಮುಂಗಡವಾಗಿ ಪಡೆದಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಬಗ್ಗೆ ರಾಯಚೂರು ಮೂಲದ ರಂಗರಾವ್ ಎಂಬುವವರು ಯಾದಗಿರಿ ನಗರ ಠಾಣೆಯಲ್ಲಿ ಸಂತೋಷ್ ರಾಠೋಡ್, ಪಾಂಡು ಹೀರಾ ಸಿಂಗ್, ಮೆಹಬೂಬ್ ಮತ್ತು ರಹೀಮ್ ಸಾಬ್ ವಿರುದ್ಧ ಎಫ್‍ಐಅರ್ ದಾಖಲಿಸಿದ್ದರು. ಈ ಬಗ್ಗೆ ತನಿಖೆ ಆರಂಭಿಸಿದ್ದ ಯಾದಗಿರಿ ಪೊಲೀಸರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಬ್ಬ ಆರೋಪಿ ರಹೀಮ್ ಸಾಬ್ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ಈ ಗ್ಯಾಂಗ್ ಮುಂಬೈಗೆ ಪರಾರಿಯಾಗಿತ್ತು. ಆರೋಪಿಗಳಿದ್ದ ಸ್ಥಳದ ಮಾಹಿತಿ ಪಡೆದ ಪೊಲೀಸರು ಮುಂಬೈಗೆ ತೆರಳಿ ಬಂಧಿಸಿದ್ದಾರೆ.