ಡೈಲಿ ವಾರ್ತೆ: 3 ಜುಲೈ 2023
ವೈದ್ಯರ ದಿನಾಚರಣೆ – ಹಿರಿಯ ವೈದ್ಯರಿಗೆ ಸನ್ಮಾನ
ಕುಂದಾಪುರ : ರೋಗಿಗಳ ಪಾಲಿಗೆ ವೈದ್ಯರು ದೇವರ ಸಮಾನ. ಇಂತಹ ಉನ್ನತ ಸ್ಥಾನದಲ್ಲಿರುವ ವೈದ್ಯರುಗಳು ತಮ್ಮ ವೃತ್ತಿಧರ್ಮ, ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಸಮಾಜದಲ್ಲಿ ವೈದ್ಯರು ಮತ್ತು ವೈದ್ಯಕೀಯ ವೃತ್ತಿಗೆ ಬಹಳ ಗೌರವವಿದೆ ಎಂದು ನಿವೃತ್ತ ಮುಖ್ಯೊಪಾಧ್ಯಾಯ ಉಪ್ಪಿನಕುದ್ರು ವೆಂಕಟರಮಣ ಹೊಳ್ಳ ಹೇಳಿದರು.
ವೈದ್ಯರ ದಿನಾಚರಣೆಯ ಸಂದರ್ಭದಲ್ಲಿ ಕುಂದಾಪುರದಲ್ಲಿ ದಶಕಗಳಿಗೂ ಹೆಚ್ಚು ಸಮಯದಿಂದ ಖ್ಯಾತವಾದ ಉತ್ತಮ್ ಹೊಮಿಯೋ ಕ್ಲಿನಿಕ್ ನ ಡಾ. ಉತ್ತಮ್ ಕುಮಾರ್ ಶೆಟ್ಟಿಯವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಕೃತಜ್ಞತೆ ಸಲ್ಲಿಸಿದ ಡಾ. ಉತ್ತಮ್ ಕುಮಾರ್ ಶೆಟ್ಟಿ, ವೈದ್ಯರು ತಮ್ಮ ಜವಾಬ್ದಾರಿ ಅರಿತು ಕಾರ್ಯಾಚರಿಸಿದಾಗ ಮಾತ್ರ ಸಮಾಜ ಅವರನ್ನು ಗೌರವಿಸುತ್ತದೆ. ಹಾಗೆಯೇ, ರೋಗಿಗಳು ಕೂಡಾ ತಮ್ಮ ವೈದ್ಯರಲ್ಲಿ ವಿಶ್ವಾಸವಿರಿಸಿ ಅವರ ಸಲಹೆಗಳನ್ನು ಪಾಲಿಸಬೇಕು ಎಂದು ನುಡಿದರು.
ಹಿರಿಯ ಪತ್ರಕರ್ತ ಕೆ. ಜಿ. ವೈದ್ಯ ಶುಭ ಹಾರೈಸಿದರು. ಸುಷೇಣ ಹೊಳ್ಳ, ಸಿಬಂದಿಗಳಾದ ಸರಸ್ವತಿ, ಪವಿತ್ರ ಮತ್ತು ಮಹೇಶ್ ಉಪಸ್ಥಿತರಿದ್ದರು.