ಡೈಲಿ ವಾರ್ತೆ:04 ಜುಲೈ 2023

ಸರ್ಕಾರದ ವಿರುದ್ಧ ಸದನದ ಒಳಗೂ-ಹೊರಗೂ ಬಿಜೆಪಿ ಪ್ರತಿಭಟನೆ

ಬೆಂಗಳೂರು: ಕಾಂಗ್ರೆಸ್‌ನ ಚುನಾವಣಾ ಪೂರ್ವ ಗ್ಯಾರಂಟಿ ಹಾಗೂ ಭರವಸೆಗಳೇ ರಾಜ್ಯ ಬಜೆಟ್ ಅಧಿವೇಶನದ ಪ್ರಮುಖ ಚರ್ಚೆಯಾಗಿದ್ದು, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವಿಳಂಬ ವಿರೋಧಿಸಿ ಬಿಜೆಪಿಯು ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಬಿಜೆಪಿ ಮುಖಂಡರಾದ ಈಶ್ವರಪ್ಪ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿ.ಸಿ.ಪಾಟೀಲ್, ನಾರಾಯಣಗೌಡ ಮತ್ತೀತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಚುನಾವಣೆ ವೇಳೆ ಘೋಷಿಸಿದಂತೆ ಗ್ಯಾರಂಟಿಗಳನ್ನು ಜನರಿಗೆ ನೀಡಬೇಕು. ಚುನಾವಣೆ ವೇಳೆ 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಈಗ ಐದು ಕೆಜಿಗೆ ಹಣ ನೀಡಲು ನಿರ್ಧರಿಸಿದೆ. ಜೊತೆಗೆ 200 ಯುನಿಟ್ ಫ್ರೀ ವಿದ್ಯುತ್ ಪ್ರತೀ ಮನೆಗೆ ಘೋಷಿಸಿತ್ತು. ಈಗ ಸರಾಸರಿ ಯುನಿಟ್ ನಿಬಂಧನೆ ವಿಧಿಸಿದ್ದು, ಇದೆಲ್ಲದರ ವಿರುದ್ಧ ಬಿಜೆಪಿಯು ಹೋರಾಟ ಮಾಡುತ್ತಿದೆ.
ಇನ್ನೊಂದೆಡೆ, ಇಂದು ಬೆಳಿಗ್ಗೆ ಅಧಿವೇಶನ ಆರಂಭವಾದ ಕೂಡಲೇ ಬಿಜೆಪಿ ನಾಯಕರು ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಪ್ರಸ್ತಾಪಿಸಿದ್ದರು. ಆದರೆ ಬಿಜೆಪಿ ನಾಯಕರ ಪ್ರಸ್ತಾಪಕ್ಕೆ ಸ್ಪೀಕರ್ ಖಾದರ್ ಅವಕಾಶ ನೀಡಿಲ್ಲ. ಕೊನೆಗೆ ಸದನಲ್ಲಿ ಮಾತಿನ ಜಟಾ-ಪಟಿ ನಡೆದು ಬಿಜೆಪಿಯವರು ಸದನದ ಬಾವಿಗಿಳಿದು ಧರಣಿಗೆ ಕೂತಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿರುವ ಬಿಜೆಪಿ ಸದಸ್ಯರು, ಕಾಂಗ್ರೆಸ್ ಜನತೆಗೆ ಮೋಸ ಮಾಡುತ್ತಿದೆ ಎಂದು ಬಿಜೆಪಿ ಧಿಕ್ಕಾರ ಎಂದು ಕೂಗುತ್ತಿದೆ.