ಡೈಲಿ ವಾರ್ತೆ: 4 ಜುಲೈ 2023

ಭಟ್ಕಳ:ಅಬ್ಬರದ ಮಳೆಗೆ ಸಂಪೂರ್ಣ ಜಲಾವೃತಗೊಂಡ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66- ಜನಜೀವನ ಅಸ್ತವ್ಯಸ್ತ!

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಅಬ್ಬರದ ಮಳೆ ಮುಂದುವರೆದಿದ್ದು, ಭಟ್ಕಳದಲ್ಲಿ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 (NH 66) ಸಂಪೂರ್ಣ ಜಲಾವೃತವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ಭಾರೀ ಮಳೆ ಸುರಿದ ಪರಿಣಾಮ ಭಟ್ಕಳದ ರಂಗಿನಕಟ್ಟೆ, ಸಂಶುದ್ದೀನ್ ವೃತ್ತ, ಶಿರಾಲಿಯಲ್ಲಿ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ಭಾರೀ ಪ್ರಮಾಣದ ನೀರು ನಿಂತಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಪರದಾಡುವಂತಾಗಿದೆ. ಭಟ್ಕಳದಲ್ಲಿ ಮಂಗಳವಾರ 112.1 ಮಿಲಿ ಮೀಟರ್ ದಾಖಲೆ ಮಳೆ ಸುರಿದಿದ್ದು, ರಾತ್ರಿಯ ವೇಳೆ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಗಾಳಿ, ಮಳೆಯ ಅಬ್ಬರಕ್ಕೆ ಹೊನ್ನಾವರದ ಪ್ರಭಾತ್ ನಗರದ ಪ್ರಕಾಶ್ ಮೇಸ್ತಾ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಮೋಳ್ಕೊಡು ಗ್ರಾಮದ ಮಣಿಕಂಠ ನಾಯ್ಕರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಇದ್ದ ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲೆಯಲ್ಲಿ ಧಾರಕಾರ ಮಳೆ ಮುಂದುವರೆಯುತಿದ್ದು, ಇನ್ನೂ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ನೀಡಿದೆ.

ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ.