ಡೈಲಿ ವಾರ್ತೆ: 5 ಜುಲೈ 2023

ಬೆಲೆ ಏರಿಕೆ ನಡುವೆ ಪಡಿತರ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 60 ರೂ. ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಮಾರಾಟ

ತಮಿಳುನಾಡು: ತಮಿಳುನಾಡು ಸರ್ಕಾರವು ಚೆನ್ನೈನ ಪಡಿತರ ಅಂಗಡಿಗಳಲ್ಲಿ ಪ್ರತಿ ಕೆಜಿಗೆ 60 ರೂಪಾಯಿಯಂತೆ ಸಬ್ಸಿಡಿ ದರದಲ್ಲಿ ಟೊಮ್ಯಾಟೊ ಮಾರಾಟ ಪ್ರಾರಂಭಿಸಿದೆ.

ದೇಶಾದ್ಯಂತ ತರಕಾರಿ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕ್ರಮ ಕೈಗೊಂಡಿದೆ. ಟೊಮ್ಯಾಟೊ ಖರೀದಿಯ ನಂತರ, ಗ್ರಾಹಕರು ಸರ್ಕಾರಕ್ಕೆ ಧನ್ಯವಾದಗಳನ್ನೂ ತಿಳಿಸಿದ್ದಾರೆ.

ಚೆನ್ನೈನ ಸಹಕಾರಿ ಸಚಿವ ಕೆಆರ್ ಪೆರಿಯಕರುಪ್ಪನ್ ಅವರು ತಮಿಳುನಾಡು ಸಚಿವಾಲಯದಲ್ಲಿ ಸಮಾಲೋಚನೆ ನಡೆಸಿದ ನಂತರ ಈ ನಿರ್ಧಾರ ಜಾರಿಗೆ ಬಂದಿದೆ.

ಮಂಗಳವಾರದಿಂದ 82 ಸಾರ್ವಜನಿಕ ವಿತರಣಾ ಅಂಗಡಿಗಳಲ್ಲಿ ಟೊಮ್ಯಾಟೊ ಕೆಜಿಗೆ 60 ರೂ.ನಂತೆ ಮಾರಾಟವಾಗಿದೆ. ದೇಶದಾದ್ಯಂತ ಟೊಮ್ಯಾಟೊ ಬೆಲೆ ಏರಿಕೆಯಾಗಿದ್ದು, ರೈತರಿಂದ ನೇರವಾಗಿ ಟೊಮ್ಯಾಟೊ ಖರೀದಿಸಿ ಮಾರುಕಟ್ಟೆ ದರಕ್ಕಿಂತ ಅರ್ಧದಷ್ಟು ಮಾರಾಟ ಮಾಡಲು ಕ್ರಮಕೈಗೊಳ್ಳುತ್ತಿದ್ದೇವೆ ಎಂದು ಸಚಿವರು ತಿಳಿಸಿದ್ದಾರೆ. ಪ್ರತಿ ವರ್ಷ ನಿರ್ದಿಷ್ಟ ಋತುವಿನಲ್ಲಿ ಟೊಮ್ಯಾಟೊ ಬೆಲೆ ದಾಖಲೆಯ ಗರಿಷ್ಠ ಮಟ್ಟ ತಲುಪುತ್ತದೆ. ಆದರೆ ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ದೇಶದ ಹಲವೆಡೆ ಟೊಮ್ಯಾಟೊ ಬೆಲೆ 100 ರೂ. ಹೊರತುಪಡಿಸಿ, ಹಸಿರು ಮೆಣಸಿನಕಾಯಿ ಕೂಡ ದಾಖಲೆಯ ಬೆಲೆ ತಲುಪಿದೆ.