ಡೈಲಿ ವಾರ್ತೆ: 6 ಜುಲೈ 2023

ಆದಿವಾಸಿ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಪ್ರಕರಣ:ಸಂತ್ರಸ್ತನ ಕಾಲು ತೊಳೆದು ಗೌರವಿಸಿದ ಮಧ್ಯಪ್ರದೇಶ ಸಿಎಂ

ಭೋಪಾಲ್: ಆದಿವಾಸಿ ಸಮುದಾಯದ ವ್ಯಕ್ತಿಯ ಮೇಲೆ ಮೂತ್ರ ವಿಸರ್ಜನೆ ಪ್ರಕರಣ ತೀವ್ರ ಖಂಡನೆ ವ್ಯಕ್ತಪಡಿಸಿರುವ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಂತ್ರಸ್ತನ ಪಾದ ತೊಳೆದು ಗೌರವ ಸಲ್ಲಿಸಿದ್ದಾರೆ.

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಭೋಪಾಲ್‌ನ ತಮ್ಮ ನಿವಾಸಕ್ಕೆ ಸಂತ್ರಸ್ತನನ್ನು ಕರೆದು ಆತನ ಕಾಲು ತೊಳೆದು, ಸನ್ಮಾನಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ.

ಘಟನೆಗೆ ಬೇಸರ ವ್ಯಕ್ತಪಡಿಸಿರುವ ಸಿಎಂ, ವೀಡಿಯೋ ನೋಡಿ ನನಗೆ ನೋವಾಯಿತು. ನಿಮ್ಮಲ್ಲಿ ನಾನು ಕ್ಷಮೆ ಕೇಳುತ್ತೇನೆ. ಜನರು ನನಗೆ ದೇವರಿದ್ದಂತೆ ಎಂದು ಸಂತ್ರಸ್ತ ದಶಮತ್‌ ರಾವತ್‌ ಬಳಿ ಕ್ಷಮೆಯಾಚಿಸಿದ್ದಾರೆ.

ಪ್ರವೇಶ್‌ ಶುಕ್ಲಾ ಎಂಬಾತ ಬುಡಕಟ್ಟು ಸಮುದಾಯದ ರಾವತ್‌ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನ ಅಕ್ರಮ ಕಟ್ಟಡವನ್ನು ಮಧ್ಯಪ್ರದೇಶ ಸರ್ಕಾರ ಬುಲ್ಡೋಜರ್‌ ಮೂಲಕ ನೆಲಸಮಗೊಳಿಸುವ ಕ್ರಮಕೈಗೊಂಡಿತು.

ಮಧ್ಯಪ್ರದೇಶ ಸಿಎಂ ನಿರ್ದೇಶನದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳು ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ ಅಡಿಯಲ್ಲಿ ಸ್ಥಳೀಯ ಪೊಲೀಸರು 35 ವರ್ಷದ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.