ಡೈಲಿ ವಾರ್ತೆ: 7 ಜುಲೈ 2023

ಮಗನ ಮೃತದೇಹ ಹಸ್ತಾಂತರಿಸಲು ನಿರಾಕರಿಸಿದ ತಾಯಿಯ ಕಪಾಳಕ್ಕೆ ಹೊಡೆದ ಪೊಲೀಸ್

ಭೋಪಾಲ್: ಇತ್ತೀಚಿನ ದಿನಗಳಲ್ಲಿ ವಿವಿಧ ರೀತಿಯ ಅಪರಾಧ ಪ್ರಕರಣ ಹಾಗೂ ಕಾನೂನು ಸುವ್ಯವಸ್ಥೆಯಿಂದಾಗಿ ಮಧ್ಯಪ್ರದೇಶ ರಾಜ್ಯವು ರಾಷ್ಟ್ರದ ಗಮನ ಸೆಳೆಯುತ್ತಿದ್ದು, ಇದೀಗ ಪೊಲೀಸ್ ಅಧಿಕಾರಿಯೊಬ್ಬರು ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ತಾಯಿಗೆ ಕಪಾಳಕ್ಕೆ ಹೊಡೆಯುವ ಮೂಲಕ ಸುದ್ದಿಯಾಗಿದ್ದಾರೆ.

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದ ಅಧಿಕಾರಿಯನ್ನು ವಿಚಾರ ತಿಳಿದ ಕೂಡಲೇ ಕೆಲಸದಿಂದ ಅಮಾನತು ಮಾಡಲಾಗಿದೆ.

ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ಮುಖೇಶ್ ವೈಷ್ಯ ಶೆಹದೋಲ್ ಜಿಲ್ಲೆಯ ಜೈತ್ಪುರ ಗ್ರಾಮದ ನಿವಾಸಿಯಾದ 9 ವರ್ಷದ ಬಾಲಕನಿಗೆ ಹಾವು ಕಚ್ಚಿದ ಪರಿಣಾಮ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ದಾಖಲಿಸಿದ ಎರಡು ದಿನಗಳ ಬಳಿಕ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಕಾರಣ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಗನ ಮೃತದೇಹವನ್ನು ತಾಯಿ ತಬ್ಬಿ ಸುಮಾರು ಹೊತ್ತು ಅಳುತ್ತಿದ್ದರು. ಈ ವೇಳೆ ಸಂತೋಷ್ ಸಿಂಗ್ ಪರಿಹಾರ್ ಎಂಬ ಅಧಿಕಾರಿಯೂ ಮರಣೋತ್ತರ ಪರೀಕ್ಷೆಗೆ ಶವವನ್ನು ಕಳುಹಿಸ ಬೇಕಾಗಿರುವ ಕಾರಣ ಅದನ್ನು ಕೊಡುವಂತೆ ಹೇಳಿದ್ದಾನೆ. ಈ ವೇಳೆ ಇದಕ್ಕೊಪ್ಪದ ಬಾಲಕನ ತಾಯಿಯ ವರ್ತನೆಯಿಂದ ಸಿಟ್ಟಿಗೆದ್ದ ಅಧಿಕಾರಿಯೂ ಆಕೆಯ ಕಪಾಳಕ್ಕೆ ಹೊಡೆದಿದ್ದಾನೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಕಳಂಕಿತ ಅಧಿಕಾರಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಬಾಲಕನ ಶವವನ್ನು ಕುಟುಂಬಸ್ಥರ ಮನವೊಲಿಸಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಉಪವರಿಷ್ಠಾಧಿಕಾರಿ ಮುಖೇಶ್ ವೈಷ್ಯ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.