ಡೈಲಿ ವಾರ್ತೆ:08 ಜುಲೈ 2023

ಪಶ್ಚಿಮ ಬಂಗಾಳ:ಪಂಚಾಯತ್ ಚುನಾವಣೆ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ 11 ಮಂದಿ ಬಲಿ!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ವೇಳೆ ಹಿಂಸಾಚಾರ ಭುಗಿಲೆದ್ದಿದೆ.

ಈ ಹಿಂಸಾಚಾರಕ್ಕೆ 11 ಮಂದಿ ಬಲಿಯಾಗಿದ್ದಾರೆ.
ಹತ್ಯೆಗೀಡಾದವರಲ್ಲಿ 6 ಮಂದಿ ತೃಣಮೂಲ ಕಾಂಗ್ರೆಸ್‌ ಸದಸ್ಯರಿದ್ದು, ಬಿಜೆಪಿ, ಎಡ, ಕಾಂಗ್ರೆಸ್‌ ಮತ್ತು ಐಎಸ್‌ಎಫ್‌ನ ತಲಾ ಒಬ್ಬೊಬ್ಬರು ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅನೇಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌, ಭದ್ರತೆಗೆ ನಿಯೋಜಿಸಲಾದ ಕೇಂದ್ರ ಪಡೆಗಳಿಂದ ಅತಿದೊಡ್ಡ ಭದ್ರತಾ ವೈಫಲ್ಯ ಸಂಭವಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.

ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಹಲವೆಡೆ ತೀವ್ರ ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು. ಇದಾದ ನಂತರ ಮತದಾನ ದಿನವಾದ ಇಂದೂ ಕೂಡ ಅಂಥದ್ದೇ ಘಟನೆಗಳು ನಡೆದಿವೆ. ಮತದಾನ ಆರಂಭಕ್ಕೂ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್‌ನಲ್ಲಿ ತಡರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸಮಾಡಿದ್ದಾರೆ.

ಕೂಚ್‌ಬೆಹಾರ್ ಜಿಲ್ಲೆಯ ಫಲಿಮಾರಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಮಾಧಬ್ ಬಿಸ್ವಾಸ್ ಅವರನ್ನು ಹತ್ಯೆ ಮಾಡಲಾಗಿದೆ. ಬಿಸ್ವಾಸ್ ಮತಗಟ್ಟೆಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಅವರನ್ನು ಟಿಎಂಸಿ ಬೆಂಬಲಿಗರು ತಡೆದಿದ್ದಾರೆ. ನಂತರ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದ್ದಂತೆ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಟಿಎಂಸಿ ಈ ಆರೋಪಗಳನ್ನ ತಳ್ಳಿಹಾಕಿದೆ.
ಈ ನಡುವೆ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗರೊಬ್ಬರನ್ನು ಥಳಿಸಿ ಉತ್ತರ 24 ಪರಗಣ ಜಿಲ್ಲೆಯ ಕದಂಬಗಚಿ ಪ್ರದೇಶದಲ್ಲಿ ಹತ್ಯೆ ಮಡಾಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಮೃತ ವ್ಯಕ್ತಿಯನ್ನು 41 ವರ್ಷದ ಅಬ್ದುಲ್ಲಾ ಎಂದು ಗುರುತಿಸಲಾಗಿದೆ. ಹಲ್ಲೆ ಬಳಿಕ ಅಬ್ದುಲ್ಲಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮುಖರ್ಜಿ ತಿಳಿಸಿದ್ದಾರೆ. ಈ ನಡುವೆ ಕೇಂದ್ರ ಪಡೆಗಳ ಭದ್ರತೆ ಮಧ್ಯೆಯೂ ಸಾವಿನ ಸಂಖ್ಯೆ ಹೆಚ್ಚುತ್ತಿವೆ. ಮಾಲ್ಡಾದ ಮಾಣಿಕ್‌ಚಕ್‌ನಲ್ಲಿ ಬಾಂಬ್ ದಾಳಿಯ ನಡೆಸಲಾಗಿದೆ. ಇದು ನಮ್ಮ ಪಕ್ಷದ ಕಾರ್ಯಕರ್ತನನ್ನು ಬಲಿ ತೆಗೆದುಕೊಂಡಿದೆ. ನಾಡಿಯಾದ ನಾರಾಯಣಪುರ ಗ್ರಾಮ ಪಂಚಾಯತಿ ಅಭ್ಯರ್ಥಿ ಹಸೀನಾ ಸುಲ್ತಾನ್ ಅವರ ಪತಿಯ ಮೇಲೆ ಗುಂಡು ಹಾರಿಸಲಾಗಿದೆ. ಮತದಾನ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಕಚ್ಚಾ, ದೇಶಿ ನಿರ್ಮಿತ ಬಾಂಬ್‌ಗಳನ್ನು ನಮ್ಮ ಕಾರ್ಯಕರ್ತರ ಮೇಲೆ ಎಸೆಯಲಾಗಿದೆ’ ಎಂದು ಆರೋಪಿಸಿದೆ.

ಮತಗಟ್ಟೆಗಳ ಬಳಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಹಲವೆಡೆ ಮತದಾನ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ.