ಡೈಲಿ ವಾರ್ತೆ: 8 ಜುಲೈ 2023

ಕಳ್ಳತನ ಶಂಕೆ:ದಲಿತ ವ್ಯಕ್ತಿಯನ್ನು ಥಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

ಭೋಪಾಲ್: ಮಧ್ಯಪ್ರದೇಶದಲ್ಲಿ ಇತ್ತೀಚಿಗೆ ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿ ಮೇಲೆ ಬಿಜೆಪಿ ನಾಯಕನೋರ್ವ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯೊಂದು ರೇವಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಸೊಹಾಗೊ ಗ್ರಾಮದಲ್ಲಿ ಘಟನೆ ನಡೆದಿದ್ದು, ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವ ಕಳ್ಳತನ ಮಾಡಿದ್ದಾನೆಂಬ ಶಂಕೆಯ ಮೇಲೆ ಆತನನ್ನು ಅಮಾನುಷವಾಗಿ ಥಳಿಸಿ ಚಪ್ಪಲಿ ಹಾರ ಹಾಕಿ ಗ್ರಾಮದ ಸುತ್ತ ಮೆರವಣಿಗೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೇಶ್ಪಾಲ್ ಸಿಂಗ್ ಹಾಗೂ ಅವರ ಮಗ ಹರಿ ಓಂ ಸಿಂಗ್ ಇಂದ್ರಜಿತ್ ಮಾಂಝಿ ಕಳ್ಳತನ ಮಾಡಿದ್ದಾರೆಂದು ಶಂಕಿಸಿ ಆತನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡುವ ಮೂಲಕ ಅವಮಾನಿಸಿದ್ದಾರೆ. ಬಳಿಕ ಈ ವಿಚಾರ ಪೊಲೀಸರಿಗೆ ತಿಳಿಸಿದ್ದರೆ ಇಡೀ ಕುಟುಂಬವನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಗಂಭೀರವಾಗಿ ಗಾಯಗೊಮಡಿದ್ದ ಇಂದ್ರಜಿತ್ ಆಸ್ಪತ್ರೆಗೆ ದಾಖಲಾಗಿದ್ದು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ಒಂದನ್ನು ರಚಿಸಲಾಗಿದೆ. ಈ ರೀತಿಯ ಪ್ರಕರಣಗಳು ಬೆಳಕಿಗೆ ಬಂದಾಗ ಆರೋಪಿಗಳನ್ನು ರಕ್ಷಿಸುವ ಮಾತಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.