ಡೈಲಿ ವಾರ್ತೆ:09 ಜುಲೈ 2023

ಕೊಲೆ ಗಡುಕರಿಗೆ ಶಿಕ್ಷೆ; ಸರ್ಕಾರ ಲಿಖಿತ ಭರವಸೆ ಕೊಡೋವರೆಗೆ ಅನ್ನಾಹಾರ ತ್ಯಾಗ – ಜೈನಮುನಿ ಗುಣಧರ ನಂದಿ ಮಹಾರಾಜ!

ಹುಬ್ಬಳ್ಳಿ: ಹಿರೇಕೋಡಿಯ ಜೈನಮುನಿ ಕಾಮಕುಮಾರ ನಂದಿ ಮಹಾರಾಜರನ್ನು ಕೊಲೆಗೈದವರಿಗೆ ಶಿಕ್ಷೆ ನೀಡುವ ಲಿಖಿತ ಭರವಸೆಯನ್ನು ಸರ್ಕಾರ ನೀಡುವವರೆಗೂ ಅನ್ನಾಹಾರ ತ್ಯಾಗ ಮಾಡುವುದಾಗಿ ವರೂರಿನ ಜೈನಮುನಿ ಗುಣಧರ ನಂದಿ ಸ್ವಾಮೀಜಿ ಹೇಳಿದ್ದಾರೆ.

ಕೊಲೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಜೈನಮುನಿಗಳಿಗೆ ಸುರಕ್ಷತೆ ಬಗ್ಗೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ ಇಲ್ಲಿಯವರೆಗೂ ರಾಜ್ಯದಲ್ಲಿ ಇಂತಹ ಕೃತ್ಯಗಳು ನಡೆದಿಲ್ಲ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದಿದ್ದಾರೆ. ಈ ವೇಳೆ ಸ್ವಾಮೀಜಿ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.


ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಅವರು ಜೈನಮುನಿಗಳ ಸುರಕ್ಷತೆ ಕಾಪಾಡುವ ವಿಷಯದಲ್ಲಿ ಸರ್ಕಾರ ನಿಕ್ಷ್ರ್ಯತನ ವಹಿಸುತ್ತಿದೆ. ಹೀಗಾಗಿ ಇವತ್ತಿನಿಂದ ಸಲ್ಲೇಖನ ವ್ರತ ಸ್ವೀಕಾರ ಮಾಡುತ್ತೇನೆ. ಜೈನಮುನಿಗಳಿಗೆ ಸೂಕ್ತ ರಕ್ಷಣೆಯನ್ನು ಕೊಡಬೇಕು. ಜೈನಮುನಿ ಕೊಲೆ ಮಾಡಿದವರಿ ಶಿಕ್ಷೆ ಆಗಬೇಕು. ಸರ್ಕಾರ ಲಿಖಿತ ಭರವಸೆ ಕೊಡುವವರೆಗೂ ಉಪವಾಸ ಮಾಡುತ್ತೇನೆ ಎಂದಿದ್ದಾರೆ.


ಜುಲೈ 6ರಿಂದ ನಂದಿ ಪರ್ವತ ಆಶ್ರಮದ ಜೈನಮುನಿಗಳು ನಾಪತ್ತೆಯಾಗಿದ್ದರು. ಸ್ವಾಮೀಜಿಯ ನಾಪತ್ತೆಯ ಕುರಿತು ಭಕ್ತರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಜೈನಮುನಿಯ ಮೃತದೇಹವನ್ನು ಖಟಕಬಾವಿಯ ಗದ್ದೆಯಲ್ಲಿದ್ದ ತೆರೆದ ಕೊಳವೆಬಾವಿಗೆ ಹಾಕಿರುವುದಾಗಿ ಮಾಹಿತಿ ನೀಡಿದ್ದರು.
ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಶುಕ್ರವಾರ ರಾತ್ರಿಯಿಂದ ಖಟಕಬಾವಿಯಲ್ಲಿ ಶೋಧಕಾರ್ಯ ನಡೆಸಿದ್ದರು. ಸ್ವಾಮೀಜಿ ಮೃತದೇಹ ಪತ್ತೆಯಾಗದ ಹಿನ್ನೆಲೆ ಶನಿವಾರವೂ ಜೆಸಿಬಿ ಸಹಾಯದಿಂದ ಶೋಧ ಕಾರ್ಯ ಮುಂದುವರೆಸಿ ಕೊಳವೆ ಬಾವಿಯ 20 ಅಡಿ ಆಳದಲ್ಲಿ ಸ್ವಾಮೀಜಿ ಮೃತದೇಹ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.