ಡೈಲಿ ವಾರ್ತೆ: 13 ಜುಲೈ 2023

ಮಂಗಳೂರು:ಮಾರಕಾಸ್ತ್ರಗಳೊಂದಿಗೆ ಮಾದಕದ್ರವ್ಯ ಎಂಡಿಎಂಎ ಮಾರಾಟ – ಇಬ್ಬರು ಅರೆಸ್ಟ್

ಮಂಗಳೂರು: ನಗರದ ಪಡುಶೆಡ್ಡೆ ಗ್ರಾಮದ ಮೂಡುಶೆಡ್ಡೆಗೆ ಹೋಗುವಲ್ಲಿ 3 ಮಾರಕಾಯುಧಗಳೊಂದಿಗೆ ನಿಷೇಧಿತ ಮಾದಕದ್ರವ್ಯ 4 ಗ್ರಾಂ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ವಾಮಂಜೂರು ತಿರುವೈಲ್ ಗ್ರಾಮದ ಮೂಡುಶೆಡ್ಡೆ ನಿವಾಸಿ ಮೊಹಮ್ಮದ್ ಶಾರೂಕ್ (27), ಬೈಕಂಪಾಡಿಯ ಜೋಕಟ್ಟೆ 62 ನೇ ತೋಕೂರು ನಿವಾಸಿ ಜಗದೀಶ್ (45) ಬಂಧಿತ ಆರೋಪಿಗಳು.

ಆರೋಪಿಗಳಿಬ್ಬರನ್ನು ಬಂಧಿಸಿರುವ ಪೊಲೀಸರು ಅವರಲ್ಲಿದ್ದ ನಿಷೇಧಿತ ಮಾದಕದ್ರವ್ಯ 4.5 ಗ್ರಾಂ ಎಂ.ಡಿ.ಎಂ.ಎ.ಯನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಇವರಲ್ಲಿದ್ದ 3 ಮಾರಕಾಯುಧ, ಮಾರಾಟಕ್ಕೆ ಬಳಸಿದ್ದ ಮಾರುತಿ ಸ್ವಿಫ್ಟ್ ಕಾರು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 4,41,700 ರೂ. ಆಗಿದೆ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.