ಡೈಲಿ ವಾರ್ತೆ:18 ಜುಲೈ 2023
ಮಗನ ಕಾಲೇಜು ಶುಲ್ಕ ಕಟ್ಟಲು ಅಪಘಾತದಿಂದ ಸಿಗುವ ಪರಿಹಾರಕ್ಕಾಗಿ ಬಸ್‌ಗೆ ಅಡ್ಡ ಬಂದ ತಾಯಿ – ಸ್ಥಳದಲ್ಲೇ ಮೃತ್ಯು!
ಚೆನ್ನೈ: ಮಗನ ಶಾಲೆ ಶುಲ್ಕ ಕಟ್ಟಲು ಹಣವಿಲ್ಲದೇ, ಪರಿಹಾರ ಸಿಗಬಹುದು ಎಂದು ಚಲಿಸುತ್ತಿದ್ದ ಬಸ್‌ಗೆ ಅಡ್ಡಲಾಗಿ ಬಂದ ಮಹಿಳೆಯೊಬ್ಬರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
45 ವರ್ಷದ ಪಾಪತಿ, ವೇಗವಾಗಿ ಬಂದ ಬಸ್‌ಗೆ ಡಿಕ್ಕಿ ಹೊಡೆದು ಸಾವನ್ನಪ್ಪಿದ ಮಹಿಳೆ. ಅಪಘಾತ ಸಂತ್ರಸ್ತರಿಗೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಯಾರೋ ಆ ಮಹಿಳೆಯನ್ನು ತಪ್ಪುದಾರಿಗೆಳೆದಿದ್ದಾರೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಪತಿಯಿಂದ ಬೇರ್ಪಟ್ಟ ನಂತರ ಕಳೆದ 15 ವರ್ಷಗಳಿಂದ ಮಹಿಳೆ ಬೇರೆ ಮನೆ ಮಾಡಿಕೊಂಡಿದ್ದರು. ಮಕ್ಕಳನ್ನು ತಾನೇ ನೋಡಿಕೊಳ್ಳುತ್ತಿದ್ದರು. ಸೇಲಂನ ಕಲೆಕ್ಟರ್ ಕಚೇರಿಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಈ ಮಹಿಳೆ ಕೆಲಸ ಮಾಡುತ್ತಿದ್ದರು.
ಈಕೆ ಮೊದಲು ಬಸ್ಸಿನ ಮುಂದೆ ಜಿಗಿಯಲು ಪ್ರಯತ್ನಿಸಿದ್ದರು. ಆದರೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆಯಿತು. ಸ್ವಲ್ಪ ಸಮಯದ ನಂತರ ರಸ್ತೆ ದಾಟಲು ಪ್ರಯತ್ನಿಸುವವಳಂತೆ ಮತ್ತೊಂದು ಬಸ್‌ಗೆ ಅಡ್ಡಲಾಗಿ ಹೋಗಿದ್ದಾರೆ. ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮಹಿಳೆ ಮೃತಪಟ್ಟಿದ್ದಾರೆ.
ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಮಹಿಳೆ ಖಿನ್ನತೆಗೆ ಒಳಗಾಗಿದ್ದರು. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂದು ಯಾರೋ ಆಕೆಯ ದಾರಿ ತಪ್ಪಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂತು.