ಡೈಲಿ ವಾರ್ತೆ:18 ಜುಲೈ 2023
ಸುರತ್ಕಲ್ ಬೀಚ್ನಲ್ಲಿ ಅಪರೂಪದ ಮೀನು ಪತ್ತೆ.!
ಮಂಗಳೂರು : ಅತ್ಯಂತ ಅಪರೂಪದ ಸ್ಪಾಟೆಡ್ ಮೊರೈ ಈಲ್ಸ್ ಮೀನು ಸುರತ್ಕಲ್ ಸಮುದ್ರದ ಬಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಜಾತಿಯ ಮೀನುಗಳು ಸಾಮಾನ್ಯವಾಗಿ ಕೆಂಪು ಬಣ್ಣದಲ್ಲಿ ಇರುತ್ತೆ. ಆದರೆ ಈ ಮೀನಿನಲ್ಲಿ ಕಪ್ಪು ಬಣ್ಣದ ಚುಕ್ಕೆ ಸಹ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ವೈಜ್ಞಾನಿಕವಾಗಿ ಈ ಮೀನಿನ ಹೆಸರು ಜಿಮ್ನೋಥೊರಾಕ್ಸ್ ಮೊರಿಂಗಾ ಎಂದಾಗಿದ್ದು ಇದನ್ನು ಸ್ಥಳೀಯ ಭಾಷೆ ಆರೋಳಿ ಮೀನು ಎಂದೂ ತುಳುವಿನಲ್ಲಿ ಮರಂಚಾ ಮೀನು ಎಂದೂ ಕರೆಯಲಾಗುತ್ತದೆ. 60 ಸೆಂಟಿಮೀಟರ್ವರೆಗೆ ಬೆಳೆಯುವ ಈ ಮೀನು ಗರಿಷ್ಠ ಎಂದರೆ 2.51 ಕೆಜಿ ತೂಗುತ್ತದೆ. ಉಷ್ಣವಲಯಗಳಲ್ಲಿ ಒಂಟಿಯಾಗಿ ವಾಸಿಸುವ ಈ ಮೀನುಗಳು ಮೊಟ್ಟೆ ಇಡುವ ಸಂದರ್ಭ ಬಂದಾಗ ವಲಸೆ ಹೋಗುತ್ತದೆ ಎನ್ನಲಾಗಿದೆ .
ಸಮುದ್ರದ ಅಲೆಯ ರಭಸಕ್ಕೆ ಈ ಮೀನು ದಡಕ್ಕೆ ಕೊಚ್ಚಿಕೊಂಡು ಬಂದಿರಬಹುದು ಎಂದು ಊಹಿಸಲಾಗಿದೆ. ಇವಕ್ಕೆ ಮೊನಚಾದ ಹಲ್ಲುಗಳು ಸಹ ಇದ್ದು ತಿನ್ನಲು ಯೋಗ್ಯವಾದ ಮೀನು ಅಲ್ಲ ಎಂದು ಸ್ಥಳೀಯ ಮೀನುಗಾರರು ಮಾಹಿತಿ ನೀಡಿದ್ದಾರೆ.