ಡೈಲಿ ವಾರ್ತೆ:26 ಜುಲೈ 2023

ಮಂಗಳೂರು: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು ಆರೋಪ – ಆಸ್ಪತ್ರೆಯ ಎದುರು ಪ್ರತಿಭಟನೆ

ಮಂಗಳೂರು: ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಗರ್ಭಿಣಿ ಮೃತಪಟ್ಟಿರುವುದಾಗಿ ಆರೋಪಿಸಿ ಮಹಿಳೆಯ ಕುಟುಂಬ ಸದಸ್ಯರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಮಂಗಳೂರಿನಲ್ಲಿ ನಡೆದಿದೆ.
ಆಂಬುಲೆನ್ಸ್ ನಲ್ಲಿ ಶವ ಮುಂದಿಟ್ಟು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಬೆಳ್ತಂಗಡಿ ತಾಲೂಕಿನ ಕುಕ್ಕೇಡಿಯ ಶಿಲ್ಪಾ ಆಚಾರ್ಯ ಹೆರಿಗೆ ನೋವಿನ ಹಿನ್ನೆಲೆ ಜುಲೈ 2ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅದೇ ದಿನ ಪರೀಕ್ಷಿಸಿದ ಡ್ಯೂಟಿ ಡಾಕ್ಟರ್ ಸಿಜೆರಿಯನ್ ಮಾಡಿ ಡೆಲೆವರಿ ಮಾಡಬೇಕೆಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಮನೆಯವರು ವೈದ್ಯೆ ವೀಣಾಗೆ ಕರೆ ಮಾಡಿದಾಗ ಭಾನುವಾರವಾದ ಕಾರಣ ಬರಲ್ಲ ಎಂದಿದ್ದರು.

ಶಿಲ್ಪಾರ ಕುಟುಂಬದ ಮೂಲದ ಪ್ರಕಾರ, ಅದೇ ದಿನ ಡಾ. ವೀಣಾ ಅನುಪಸ್ಥಿತಿಯಲ್ಲಿ ಬೇರೆ ವೈದ್ಯರು ಶಿಲ್ಪಾರಿಗೆ ಸಿಜೆರಿಯನ್ ಮಾಡಿ ಡೆಲೆವರಿ ಮಾಡಿದ್ದಾರೆ. ಆ ಬಳಿಕ ಹೆಣ್ಣು ಮಗು ಆಗಿದೆ, ಆದರೇ ಗರ್ಭಕೋಶವನ್ನು ತೆಗೆಯಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದರು. ಎರಡು ದಿನಗಳ ನಂತರ ಶಿಲ್ಪಾಗೆ ಜ್ವರ ಬಂದಿದೆ ಎಂದು ಚಿಕಿತ್ಸೆ ನೀಡಿದ್ದಾರೆ. 5 ದಿನಗಳ ನಂತರ ಬ್ರೆನ್ ಮೇಜರ್ ಡ್ಯಾಮೇಜ್ ಆಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಮೃತರ ಪತಿ ಪ್ರದೀಪ್ ಆಚಾರ್ಯ ಮಾಹಿತಿ ನೀಡಿದ್ದಾರೆ. ಆದರೆ ಜುಲೈ 25 ರಂದು ಬಾಣಂತಿ ಶಿಲ್ಪಾ ಆಚಾರ್ಯ ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷಕ್ಕೆ ಆಕೆಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ಆಕೆಯ ಪತಿ ಠಾಣೆಗೆ ದೂರು ನೀಡಿದ್ದಾರೆ. ಇಂದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ವೆನ್ ಲಾಕ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲು ಪೊಲೀಸರು ಬಂದಿದ್ದು, ಈ ವೇಳೆ ಖಾಸಗಿ ಆಸ್ಪತ್ರೆ ಬಳಿ ಮೃತದೇಹ ತಡೆದು ಸಂಬಂಧಿಕರು, ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ .