



ಡೈಲಿ ವಾರ್ತೆ:27 ಜುಲೈ 2023


ಉಡುಪಿ:ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಪ್ರಕರಣ – ಸತ್ಯಾಂಶ ಹೊರಬರುವವರೆಗೆ ತಾಳ್ಮೆ ಇರಲಿ:
ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್
ಉಡುಪಿ: ಇಲ್ಲಿನ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿರುವ ಬಗ್ಗೆ ಕುರುಹು ಲಭಿಸಿಲ್ಲ. ಸಂಪೂರ್ಣ ತನಿಖೆಯಾದ ಬಳಿಕ ಮಾಹಿತಿ ನೀಡಲಾಗುವುದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಹೇಳಿದರು.
ಪ್ರಕರಣ ನಡೆದ ಕಾಲೇಜಿಗೆ ಭೇಟಿ ನೀಡಿದ ಅವರು, ಕಾಲೇಜು ಆಡಳಿತ ಮಂಡಳಿ, ಸಂತ್ರಸ್ತೆ ಮತ್ತು ಆರೋಪಿತ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಪ್ರಕರಣ ಎಷ್ಟು ದಿನ ಮುಂದೆ ಹೋಗುತ್ತದೆ ಎಂಬ ಮಾಹಿತಿಯಿಲ್ಲ. ಮತ್ತಷ್ಟು ತನಿಖೆ ನಡೆಸಲಾಗುವುದು. ಈ ಬಗ್ಗೆ ಯಾರೂ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಡಿ. ಸತ್ಯಾಂಶ ಹೊರಬರುವವರೆಗೆ ಎಲ್ಲರೂ ತಾಳ್ಮೆ ವಹಿಸುವುದು ಉತ್ತಮ ಎಂದು ಹೇಳಿದರು.
ಈ ಬಗ್ಗೆ ಮತ್ತಷ್ಟು ತನಿಖೆ ಮಾಡಲು ಸಮಯಾವಕಾಶ ಬೇಕಿದೆ. ಅದುವರೆಗೆ ಎಲ್ಲರೂ ಸಂಯಮದಿಂದ ಇರುವುದು ಅಗತ್ಯ. ಹಿಡನ್ ಕೆಮರಾ ಇರುವ ಬಗ್ಗೆ ಯಾವುದೇ ಕುರುಹು ಇಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಹಾಗೂ ಪೊಲೀಸ್ ಇಲಾಖೆ ಮೂಲಕ ಸೂಕ್ತ ತನಿಖೆ ನಡೆಸಲಾಗುವುದು ಎಂದು ಖುಷ್ಬೂ ಹೇಳಿದರು.