ಡೈಲಿ ವಾರ್ತೆ:28 ಜುಲೈ 2023

ವರದಿ : ವಿದ್ಯಾಧರ ಮೊರಬಾ

ಕೃಷಿ ಉತ್ಸವಗಳು ಎಲ್ಲೆಡೆ ನಿರಂತರವಾಗಿ ನಡೆಯುತ್ತಿರಬೇಕು: ತಹಶೀಲ್ದಾರ ಪ್ರವೀಣ ಎಚ್.

ಅಂಕೋಲಾ : ಕೃಷಿ ಕ್ಷೇತ್ರವನ್ನು ಉತ್ತೇಜಿಸುವಂತಹ ಕೃಷಿ ಉತ್ಸವಗಳು, ಕೃಷಿ ಕಾರ್ಯಕ್ರಮಗಳು ಎಲ್ಲೆಡೆ ನಿರಂತರವಾಗಿ ನಡೆಯುತ್ತಿರಬೇಕು ಎಂದು ತಾಲೂಕಾ ದಂಡಾಧಿಕಾರಿ ಪ್ರವೀಣ ಹುಚ್ಚಣ್ಣನವರ ಹೇಳಿದರು.

ಅವರು ಅಂಕೋಲಾ ಬೆಳೆಗಾರರ ಸಮಿತಿ ಇವರು ವಂದಿಗೆಯಲ್ಲಿ ಹಮ್ಮಿಕೊಂಡ ಕೃಷಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಕೃಷಿಯ ಕುರಿತು ಪರಿಣಾಮಕಾರಿಯಾದ ಜಾಗೃತಿ ಮೂಡಬೇಕಾದರೆ ಇಂತಹ ಉತ್ಸವಗಳು, ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಶಾಲಾ ವಿದ್ಯಾರ್ಥಿಗಳೊಂದಿಗೆ ಸಂಘ ಸಂಸ್ಥೆಗಳು ಸಾಮೂಹಿಕವಾಗಿ ಕೃಷಿ ಜಾಗೃತಿಯಲ್ಲಿ ತೊಡಗಿಕೊಂಡರೆ ಕೃಷಿ ಕ್ಷೇತ್ರದಲ್ಲಿ ಜಾಗೃತಿ ಮೂಡಬಹುದು ಎಂದರು. ಬೆಳೆಗಾರರ ಸಮಿತಿ ಅಧ್ಯಕ್ಷ ನಾಗರಾಜ ನಾಯಕ ಪ್ರಾಸ್ತಾವಿಕ ಮಾತನಾಡಿ ಅಭಿವೃದ್ಧಿಯೆಂದರೆ ಕೇವಲ ರಸ್ತೆ, ಕಟ್ಟಡ, ಸೇತುವೆಗಳು ಅಲ್ಲ, ಕೃಷಿಕ್ಷೇತ್ರ ವೃದ್ಧಿಯಾದರೆ ಮಾತ್ರ ನಿಜವಾದ ಅಭಿವೃದ್ದಿ ಸಾಧಿಸಿದಂತೆ. ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರ ಇದನ್ನು ಮೊದಲು ಮನಗಾಣಬೇಕು. ಕಡತಗಳಲ್ಲಿ ಕೃಷಿ ಕಾರ್ಯ ಆಗುವದಿಲ್ಲ. ಮಣ್ಣಿನ ಸಹವಾಸ ಮಾಡಿದಾಗ ಮಾತ್ರ ಕೃಷಿ ಮಾಡಲು ಸಾಧ್ಯ. ಬೆಳೆಗಾರರ ಸಮಿತಿಯ ಹದಿನೈದು ವರ್ಷದ ಪ್ರಯತ್ನ ಸಾಕಾರಗೊಳ್ಳಲು ಎಲ್ಲರೂ ಸಹಕರಿಸಬೇಕು ಎಂದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶ್ರೀಧರ ನಾಯ್ಕ ಮಾತನಾಡಿ ಕೃಷಿ ಚಟುವಟಿಕೆಗಳಲ್ಲಿ ಕೂಲಿಕಾರರ ಸಮಸ್ಯೆ ಕಾಡುತ್ತಿದೆ. ಇಂತಹ ಸಂದರ್ಭದಲ್ಲಿ ಯಾಂತ್ರಿಕ ಕೃಷಿಗೆ ಮೊರೆಹೋಗುವದು ಅನಿವಾರ್ಯವಾಗಿದೆ ಎಂದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ನಾಗರಾಜ ನಾಯಕ, ತೋಟಗಾರಿಕೆ ಇಲಾಖೆಯ ಅಧಿಕಾರಿ ಪ್ರಸನ್ನ ಮಾತನಾಡಿದರು. ವೇದಿಕೆಯಲ್ಲಿ ಬೆಳೆಗಾರರ ಸಮಿತಿಯ ಗೌರವಾಧ್ಯಕ್ಷ ದೇವರಾಯ ನಾಯಕ, ಹನುಮಂತ ಗೌಡ, ಹೊನ್ನಪ್ಪ ನಾಯಕ ಉಪಸ್ಥಿತರಿದ್ದರು. ಅತಿಥಿಗಳಿಗೆ ಸಂಘಟಕರು ಕಂಬಳಿಯನ್ನು ನೀಡಿ ಸ್ವಾಗತಿಸಿದರು. ನಂತರ ವಂದಿಗೆಯ ವೆಂಕಟರಮಣ ನಾಯಕ ಇವರ ಗದ್ದೆಯಲ್ಲಿ ಅನುಭವಿಕ ರೈತರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹನುಮಟ್ಟಾ ನಂ.2 ಇದರ ವಿದ್ಯಾರ್ಥಿಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಭತ್ತದ ಸಸಿಯನ್ನು ನಾಟಿ ಮಾಡುವ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು ಹಾಗೂ ಹಲವು ಗಣ್ಯರ ಸಮೇತ ಸಾಮೂಹಿಕವಾಗಿ ನಾಟಿ ಕಾರ್ಯ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಮುಖರಾದ ಮಹಾಂತೇಶ ರೇವಡಿ, ಪುರಸಭೆಯ ಮಾಜಿ ಉಪಾಧ್ಯಕ್ಷೆ ರೇಖಾ ಗಾಂವಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಬಿಂದೇಶ ನಾಯಕ, ಹೊನ್ನಪ್ಪ ನಾಯಕ, ನಾರಾಯಣ ಬಿ ನಾಯಕ ಸೂರ್ವೆ, ಶಂಕರ ಗೌಡ ಅಡ್ಲೂರ, ಸುರೇಶ ನಾಯಕ ಅಲಗೇರಿ, ನಿತ್ಯಾನಂದ ಗಾಂವಕರ, ವಂದಿಗೆ ಗ್ರಾಮಸ್ತರು, ಶಾಲೆಯ ಶಿಕ್ಷಕ ಶಿಕ್ಷಕಿಯರು, ಗ್ರಾಮದ ರೈತರು ಉಪಸ್ಥಿತರಿದ್ದರು. ಬೆಳೆಗಾರರ ಸಮಿತಿಯ ಕಾರ್ಯದರ್ಶಿ ರಾಮಚಂದ್ರ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.