ಡೈಲಿ ವಾರ್ತೆ:02 ಆಗಸ್ಟ್ 2023
ವರದಿ: ರವಿತೇಜ ಕಾರವಾರ
ವಿದ್ಯುತ್ ಸಂಪರ್ಕದಲ್ಲಿದ್ದ ಮೊಬೈಲ್ ಚಾರ್ಜರ್ ಪಿನ್ ಬಾಯಲ್ಲಿ ಹಾಕಿಕೊಂಡ 8 ತಿಂಗಳ ಮಗು ವಿದ್ಯುತ್ ಶಾಕ್ ಯಿಂದ ಮೃತ್ಯು.!
ಕಾರವಾರ: ವಿದ್ಯುತ್ ಸಂಪರ್ಕದಲ್ಲಿದ್ದ ಮೊಬೈಲ್ ಚಾರ್ಜರ್ ಪಿನ್ ಬಾಯಿಯಲ್ಲಿ ಹಾಕಿಕೊಂಡ ಪರಿಣಾಮ 8 ತಿಂಗಳ ಮಗು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಾರವಾರ ತಾಲೂಕಿನ ಸಿದ್ದರದಲ್ಲಿ ಬುಧವಾರ ನಡೆದಿದೆ.
ಹೆಸ್ಕಾಂ ಗುತ್ತಿಗೆ ಆಧಾರದ ಉದ್ಯೋಗಿಯಾಗಿರುವ ಸಂತೋಷ ಹಾಗೂ ಸಂಜನಾ ದಂಪತಿಯ 8 ತಿಂಗಳ ಹೆಣ್ಣು ಮಗು ಸಾನಿಧ್ಯ ಮೃತ ದುರ್ದೈವಿ ಮಗುವಾಗಿದೆ.
ಮೊಬೈಲ್ ಚಾರ್ಜ್ ಹಾಕಿ ತೆಗೆದ ನಂತರ ಪಾಲಕರು ಸ್ವಿಚ್ ಬಂದ್ ಮಾಡಿರಲಿಲ್ಲ. ಅಲ್ಲದೇ ಇದು ಮಗುವಿನ ಹತ್ತಿರವೇ ಇದ್ದರಿಂದ ಸಹಜವಾಗಿ ಚಾರ್ಜರ್ ಪಿನ್ ಬಾಯಲ್ಲಿ ಹಾಕಿಕೊಂಡಾಗ ಮಗುವಿಗೆ ಶಾಕ್ ತಗುಲಿದೆ ಎಂದು ತಿಳಿದು ಬಂದಿದೆ.
ತಕ್ಷಣ ಬೈಕ್ ನಲ್ಲಿ ಮಗುವನ್ನು ನಗರದ ಕ್ರಿಮ್ಸ್ ಆಸ್ಪತ್ರೆಗೆ ತರಲಾಯಿತಾದರೂ ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿತ್ತು.
ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.