ಡೈಲಿ ವಾರ್ತೆ:03 ಆಗಸ್ಟ್ 2023
ದಕ್ಷಿಣ ಕನ್ನಡ:ನಿಷೇಧಿತ ಮಾದಕ ವಸ್ತು (ಚರಸ್) ಸಾಗಾಟ-ಓರ್ವನ ಬಂಧನ.!
ಮಂಗಳೂರು : ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಚರಸ್ ಸಾಗಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಸುರತ್ಕಲ್ ಸೂರಿಂಜೆಯ ಕಿನ್ನಿಗುಡ್ಡೆ ನಿವಾಸಿ ಅಬ್ದುಲ್ ಅಝೀಝ್(34) ಎಂದು ಗುರುತಿಸಲಾಗಿದೆ. ಈತನಿಂದ 230.4 ಗ್ರಾಂ ತೂಕದ ಚರಸ್ ಹಾಗೂ ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ನಗರದಾದ್ಯಂತ ಮಾದಕ ವ್ಯಸನ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಫ್ಲೆಟ್ ಇಲ್ಲದ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ. ತಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಸೂರಿಂಜೆ ಕಿನ್ನಿಗುಡ್ಡೆ ಹೌಸ್ ನಿವಾಸಿ ಅಬ್ದುಲ್ ಅಝೀಜ್‌ನನ್ನು ವಶಕ್ಕೆ ಪಡೆದು ಕಾರು ಪರಿಶೀಲನೆ ಮಾಡಿದಾಗ 250 ಗ್ರಾಂ ತೂಕದ ಮಾದಕ ವಸ್ತು ಚರಸ್ ಪತ್ತೆಯಾಗಿದ್ದು, ಇನ್ನೋರ್ವ ಆರೋಪಿ ಪರಾರಿಯಾಗಿದ್ದಾನೆ.
ಇನ್ನು ಪರಾರಿಯಾದ ಆರೊಪಿಯ ಪತ್ತೆಗಾಗಿ ಪೊಲೀಸರು ವ್ಯಾಪಕ ಕಾರ್ಯಚರಣೆ ನಡೆಸುತ್ತಿದ್ದಾರೆ. ಬಜಪೆ ಠಾಣಾ ಪಿ.ಐ. ಪ್ರಕಾಶ್ ನೇತೃತ್ವದ ತಂಡ ಕಾರ್ಯಚರಣೆಯಲ್ಲಿ ಪಾಲ್ಗೊಂಡಿತ್ತು.