ಡೈಲಿ ವಾರ್ತೆ:06 ಆಗಸ್ಟ್ 2023
ಚೆನ್ನೈನ ಬೈಕ್ ರೇಸ್‌ನಲ್ಲಿ ಅಪಘಾತ: ಬೆಂಗಳೂರು ಮೂಲದ 13ರ ಪ್ರತಿಭೆ ದುರ್ಮರಣ
ಬೆಂಗಳೂರು: ಚೆನ್ನೈನ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಶನಿವಾರ ನಡೆದ ಎಂಆರ್‌ಎಫ್ ಎಂಎಂಎಸ್‌ಸಿ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ಮೋಟಾರ್‌ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನಲ್ಲಿ ಅಪಘಾತಕ್ಕೀಡಾಗಿ ಬೆಂಗಳೂರು ಮೂಲದ 13 ವರ್ಷದ ಕೊಪ್ಪರಂ ಶ್ರೇಯಸ್ ಹರೀಶ್ ದುರ್ಮರಣ ಹೊಂದಿದ್ದಾರೆ.
ಟರ್ನ್-1 ನಿಂದ ನಿರ್ಗಮಿಸಿದ ಶ್ರೇಯಸ್ ತಿರುವಿನಲ್ಲಿ ಆಯತಪ್ಪಿ ಬೈಕ್ ಉರುಳಿದ್ದು, ಈ ವೇಳೆ ಆತನ ತಲೆಗೆ ಹಾಕಲಾಗಿದ್ದ ಹೆಲ್ಮೆಟ್ ಕಳಚಿಕೊಂಡಿತ್ತು. ಹಿಂದಿನಿಂದ ಬರುತ್ತಿದ್ದ ಇನ್ನೊಬ್ಬ ಸ್ಪರ್ಧಿಯ ಬೈಕ್ ಶ್ರೇಯಸ್ ಮೇಲೆ ಹರಿದು ಮುಂದೆ ಸಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ತಕ್ಷಣ ಸ್ಪರ್ಧೆಯನ್ನು ಸ್ಥಗಿತಗೊಳಿಸಿ, ಶ್ರೇಯಸ್‌ನನ್ನು ಅಂಬುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಶ್ರೇಯಸ್ ಆಸ್ಪತ್ರೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ವರದಿಗಳು ತಿಳಿಸಿವೆ.
2010 ಜುಲೈ 26ರಂದು ಜನಿಸಿದ ಶ್ರೇಯಸ್ ಬೆಂಗಳೂರಿನ ಕೆನ್ಸ್ರಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ. ಚಿಕ್ಕ ವಯಸ್ಸಿನಿಂದಲೇ ಬೈಕ್ ರೇಸ್‌ನಲ್ಲಿ ಅತೀವ ಆಸಕ್ತಿ ಹೊಂದಿದ್ದ. ಪೆಟ್ರೋನಾಸ್‌ನ ರೂಕಿ ವಿಭಾಗದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟ ಸೇರಿದಂತೆ ಸತತ 4 ಬಾರಿ ರೇಸ್‌ಗಳನ್ನು ಗೆದ್ದಿದ್ದ.
ಈ ದುರ್ಘಟನೆ ಬಳಿಕ ಮದ್ರಾಸ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಶನಿವಾರ ಹಾಗೂ ಭಾನುವಾರ ನಿಗದಿಯಾಗಿದ್ದ ಉಳಿದ ರೇಸ್‌ಗಳನ್ನು ರದ್ದುಗೊಳಿಸಿದೆ.