ಡೈಲಿ ವಾರ್ತೆ:14 ಆಗಸ್ಟ್ 2023

ಹತ್ತು ವರ್ಷದ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲನಿಂದ ಅತ್ಯಾಚಾರ ಪ್ರಕರಣ:ಆರೋಪಿ ಬಂಧನದ ನಂತರ ಶಾಲೆ ಮುಚ್ಚಲು ಆದೇಶ!

ಬೆಂಗಳೂರು: ಅಪ್ರಾಪ್ತ ವಯಸ್ಕ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಶಾಲೆಯ ಮಾಲಕ, ಪ್ರಾಂಶುಪಾಲನನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಶಿಕ್ಷಣ ಇಲಾಖೆ ಶಾಲೆಗೆ ಬೀಗ ಜಡಿಯುವ ನಿರ್ಣಾಯಕ ಕ್ರಮ ಕೈಗೊಂಡಿದೆ.

ಹತ್ತು ವರ್ಷದ ವಿದ್ಯಾರ್ಥಿನಿ ಮೇಲೆ ಪ್ರಾಂಶುಪಾಲ ಅತ್ಯಾಚಾರವೆಸಗಿರುವ ಆರೋಪದಲ್ಲಿ ವರ್ತೂರು ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಮುಳ್ಳೂರು ಸಮೀಪದ ಪ್ರತಿಷ್ಠಿತ ಖಾಸಗಿ ಶಾಲೆಯ ಸಂಸ್ಥಾಪಕ ಹಾಗೂ ಪ್ರಾಂಶುಪಾಲ ಲ್ಯಾಬರ್ಡ್ ಪುಷ್ಪರಾಜ್ ನನ್ನು(65) ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದರು.

ಕೋರಮಂಗಲ ವ್ಯಾಪ್ತಿಯಲ್ಲಿ ಶಾಲೆಯನ್ನು ಸ್ಥಾಪಿಸಲು ಆರಂಭದಲ್ಲಿ ಅನುಮತಿ ನೀಡಲಾಗಿದ್ದು, ಆರೋಪಿಯು ನಿಯಮಾವಳಿಗಳನ್ನು ಉಲ್ಲಂಘಿಸಿ ವರ್ತೂರಿನಲ್ಲಿ ಅನಧಿಕೃತವಾಗಿ ಶಾಲೆಯ ನಿರ್ಮಾಣದಲ್ಲಿ ತೊಡಗಿರುವ ಆರೋಪ ಪರಿಶೀಲನೆಯಲ್ಲಿದೆ. ಈ ಸಂಬಂಧ ಬ್ಲಾಕ್ ಶಿಕ್ಷಣಾಧಿಕಾರಿ (ಬಿಇಒ) ಆದೇಶ ಹೊರಡಿಸಿದ್ದು, ಈ ಬೆಳವಣಿಗೆಯಿಂದಾಗಿ ಈ ಶಾಲೆಯಲ್ಲಿ ಓದುತ್ತಿರುವ 140 ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ಕಂಗಾಲಾಗಿದ್ದು, ಶಾಲೆಯ ಬದಲಿ ಬಗ್ಗೆ ಚಿಂತೆ ಗೊಳಗಾಗಿದ್ದಾರೆ.

ಆ ಪ್ರದೇಶದಲ್ಲಿ ತಾವು ಆಯ್ಕೆ ಮಾಡಿಕೊಂಡ ಶಾಲೆಯಲ್ಲಿ ಸೀಟು ದೊರಕಿಸಿಕೊಡುವುದಾಗಿ, ಶುಲ್ಕವನ್ನು ಸರಕಾರವೇ ನಿಗದಿಪಡಿಸಲಿದೆ ಎಂದು ಪೋಷಕರಿಗೆ ಭರವಸೆ ನೀಡಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ. ಪೋಷಕರಿಗೆ ಪರ್ಯಾಯ ಶಾಲೆಗಳನ್ನು ಆಯ್ಕೆ ಮಾಡಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆಯುವಂತೆ ತಿಳಿಸಲಾಗಿದೆ.