ಡೈಲಿ ವಾರ್ತೆ:19 ಆಗಸ್ಟ್ 2023

ವರದಿ : ವಿದ್ಯಾಧರ ಮೊರಬಾ

ಅಂಕೋಲಾ:ಲಾರಿಯಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಎಂಗಲ್ ಪಟ್ಟಿ ವಿದ್ಯಾರ್ಥಿಗಳ ಮೇಲೆ ಉರುಳಿ ಬಿದ್ದು ಗಂಭೀರ ಗಾಯ!

ಅಂಕೋಲಾ : ಟ್ರಾಲಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಕಬ್ಬಿಣದ ಎಂಗಲ್ ಪಟ್ಟಿ ಕೆಳಗೆ ಉರುಳಿದ ಪರಿಣಾಮ ಹೆದ್ದಾರಿ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯ ಗೊಂಡ ಘಟನೆ ಶನಿವಾರ ರಾ.ಹೆ.66ರ ನೀಲಪುರ ಕ್ರಾಸ್ ಬಳಿ ಸಂಭವಿಸಿದೆ.


ಇಲ್ಲಿಯ ಅಜ್ಜಿಕಟ್ಟಾ ಸರ್ಕಾರಿ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಇಬ್ಬರೂ ಹಾವೇರಿ ಜಿಲ್ಲೆ ಯ ನೆಟ್ಟೂರಿನ ದರ್ಶನ ಕೆಂಚಪ್ಪ ಕಂಡೋಜಿ (12) ಮತ್ತು ಡುಮ್ಮಿಹಾಳದ ಕಿರಣ ಹನುಮಂತಪ್ಪ ಮೇಗಲಮನೆ (12) ಇವರು ತಮ್ಮ ಸಹಪಾಠಿಗಳೊಂದಿಗೆ ವಿಠ್ಠಲಘಾಟ್‍ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ರಾ.ಹೆ.66ರ ಕಚ್ಚಾರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅವರ ಮೈಮೇಲೆ ಕಾರವಾರ ಕಡೆಯಿಂದ ಕುಮಟಾ ಕಡೆಗೆ ಸಂಚಾರಿಸುತ್ತಿದ್ದ ಟ್ರಾಲಿ ಲಾರಿಯಲ್ಲಿದ್ದ ಕಬ್ಬಿಣದ ಎಂಗಲ್ ಪಟ್ಟಿ ಬಿದ್ದ ಪರಿಣಾಮ ಅವರಿಬ್ಬರು ಗಂಭೀರಗಾಯಗೊಂಡು ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕತ್ಸೆ ಪಡೆದು ಕಾರವಾರ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಉಪಚಾರಕ್ಕೆ ಸಾಗಿಸಲಾಗಿದೆ.

ಪಿಐ ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಎಸ್‍ಐ ಉದ್ದಪ್ಪ ಧರೆಪ್ಪನವರ, ಸುನೀಲ ಹುಲ್ಲೊಳ್ಳಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಲಾರಿ ಮತ್ತು ಚಾಲಕನ್ನು ವಶಕ್ಕೆ ಪಡೆದು ಲಾರಿ ಚಾಲಕ ಮಹಾರಾಷ್ಟ್ರ ಕೊಲ್ಲಾಪುರದ ಸಾಗೋಲಾದ ವಿಜಯ ಬಲಭೀಮ್ ಬಾಲುಡೊರಲೆ ವಿರುದ್ಧ ಪ್ರಕರಣ ದಾಖಲಿಸಿ ಕೊಂಡು ತನಿಖೆ ಮುಂದುವರೆಸಿದ್ದಾರೆ.

ಗಾಯಾಳನ್ನು ಆಸ್ಪತ್ರೆಗೆ ಸಾಗಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳಾದ ನವಿನ ಗಾಂವಕರ, ದರ್ಶನ ನಾಯ್ಕ, ಬದ್ರುದ್ದೇನೆ ಶೇಖ್ ಪೊಲೀಸ್ ಸಿಬ್ಬಂದಿ ಪುನೀತ ನಾಯ್ಕ, ಸತೀಶ ನಾಯ್ಕ ಸಹ ಕರಿಸಿದರು. ಡಾ.ಈಶ್ವರಪ್ಪ ಚಿಕಿತ್ಸೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿದೇ ರ್ಶಕಿ ಶಾಂತಾಲಾ ನಾಯಕ, ಪಿಐ ಸಂತೋಷ ಶೆಟ್ಟಿ, ಎಎಸ್‍ಐ ತಿಮ್ಮಪ್ಪ ಇತರರು ಭೇಟಿ ನೀಡಿದರು.