ಡೈಲಿ ವಾರ್ತೆ:ಜನವರಿ/29/2026

ಬ್ರಹ್ಮಾವರದಲ್ಲಿ ‘ವಾಯ್ಸ್ ಆಫ್ ಕರಾವಳಿ–2026’ ಸೀಸನ್–6 ಫೈನಲ್ : 10 ಪ್ರತಿಭಾವಂತ ಗಾಯಕರು ರಣಾಂಗಣಕ್ಕೆ

ಬ್ರಹ್ಮಾವರ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಬ್ರಹ್ಮಾವರ ವಲಯ, ರೋಟರಿ ರಾಯಲ್ ಬ್ರಹ್ಮಾವರ ಹಾಗೂ ರೋಟರಾಕ್ಟ್ ಕ್ಲಬ್ ಬ್ರಹ್ಮಾವರ ಇವರ ಜಂಟಿ ನೇತೃತ್ವದಲ್ಲಿ, ಫೆರ್ನಾಂಡಿಸ್ ಗ್ರೂಪ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಅಪ್ರತಿಮ ಸಂಗೀತ ರಿಯಾಲಿಟಿ ಶೋ ‘ವಾಯ್ಸ್ ಆಫ್ ಕರಾವಳಿ–2026’ ಸೀಸನ್–6 ಇದರ ಫೈನಲ್ ಸ್ಪರ್ಧೆ ಜನವರಿ 31ರಂದು ಶನಿವಾರ ಸಂಜೆ 6 ಗಂಟೆಗೆ ಬ್ರಹ್ಮಾವರದ ನಿರ್ಮಲ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಲಿದೆ.

ಈಗಾಗಲೇ ನೂರಾರು ಸ್ಪರ್ಧಿಗಳಲ್ಲಿ ಆಡಿಷನ್ ಮೂಲಕ ಆಯ್ಕೆಯಾದ 10 ಪ್ರತಿಭಾವಂತ ಗಾಯಕರ ನಡುವೆ ಫೈನಲ್ ಹಂತದ ಪೈಪೋಟಿ ನಡೆಯಲಿದೆ.

ಹೆಮ್ಮಾಡಿಯ ಎಚ್.ಜಿ. ಮೋಹನ್ ಸಾಗರ, ಭದ್ರಾವತಿಯ ಚಂದನ ಸಿ.ಎನ್., ಸುರೇಶ್ (ಹೆಮ್ಮಾಡಿ), ಗಣೇಶ್ (ಕಾರ್ಕಳ), ಸಂಚಲಿ (ಪಿತ್ರೋಡಿ), ಶ್ರೀಶಾಂತ್ (ಉಪ್ಪಿನಕುದ್ರು), ಯುಕ್ತಾ ಹೊಳ್ಳ (ಕುಂದಾಪುರ), ದಿನೇಶ್ ಕೆ. (ಮೂಡಬಿದ್ರಿ), ಸ್ಫೂರ್ತಿ ಯು. (ಬಾರ್ಕುರು) ಹಾಗೂ ಹನಿ ವೇನ್ಯ (ಕಾರ್ಕಳ) ಇವರು ಫೈನಲ್ ಸ್ಪರ್ಧೆಗೆ ಆಯ್ಕೆಯಾದ ಸ್ಪರ್ಧಾಳುಗಳಾಗಿದ್ದಾರೆ.

ಸ್ಪರ್ಧೆಯ ತೀರ್ಪುಗಾರರಾಗಿ ವಿಶ್ವ ದಾಖಲೆಯ ಸರದಾರ ಯಶವಂತ್ ಎಂ.ಜಿ. ಹಾಗೂ ಸಾಸ್ತಾನ ಇಗರ್ಜಿ ಧರ್ಮಗುರುಗಳಾದ ಸಂಗೀತಗಾರ ರೆ. ಫಾ. ಸುನೀಲ್ ಡಿಸಿಲ್ವಾ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಪ್ರೇಕ್ಷಕರಿಗಾಗಿ ಕೂಡ ಹಲವಾರು ಆಕರ್ಷಕ ಬಹುಮಾನಗಳನ್ನು ಆಯೋಜಿಸಲಾಗಿದೆ.

ಉದಯೋನ್ಮುಖ ಸಂಗೀತ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘಟಕರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.