ಡೈಲಿ ವಾರ್ತೆ:20 ಆಗಸ್ಟ್ 2023
ತಿರುಪತಿ ದೇವಸ್ಥಾನದಲ್ಲಿ ಬಾಂಬ್ ಸ್ಪೋಟಿಸುದಾಗಿ ದೇವಸ್ಥಾನದ ಕಂಟ್ರೋಲ್ ರೂಮ್‌ಗೆ ಹುಸಿ ಬೆದರಿಕೆ ಕರೆ – ಆರೋಪಿಯ ಬಂಧನ
ಆಂಧ್ರಪ್ರದೇಶ:ತಿರುಪತಿ ದೇವಸ್ಥಾನದಲ್ಲಿರುವ ಭಕ್ತರನ್ನು ಬಾಂಬ್ ಸ್ಪೋಟಿಸಿ ಕೊಲ್ಲುವುದಾಗಿ
ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಆ.19 ರಂದು ಶನಿವಾರ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ವ್ಯಕ್ತಿ ತಮಿಳುನಾಡಿನ ಸೇಲಂ ಮೂಲದ ಬಿ ಬಾಲಾಜಿ (39) ಎಂದು ತಿಳಿದು ಬಂದಿದೆ.
ತಿರುಮಲ ತಿರುಪತಿ ದೇವಸ್ಥಾನ ಕಂಟ್ರೋಲ್ ರೂಮ್ ಗೆ ಆ.15ರಂದು ಕರೆ ಮಾಡಿ ಬಾಂಬ್ ಸ್ಪೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದಾಗಿ ತಿರುಮಲ ತಿರುಪತಿ ದೇವಸ್ಥಾನದ ಅಲಿಪಿರಿಯ ಕಂಟ್ರೋಲ್ ರೂಂಗೆ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ಪ್ರಕಟಣೆ ತಿಳಿಸಿದೆ.
ಕಂಟ್ರೋಲ್ ರೂಮ್ ನ ಲ್ಯಾಂಡ್ ಲೈನ್ ಗೆ ಕರೆ ಮಾಡಿದ್ದ ವ್ಯಕ್ತಿಯು ಮಧ್ಯಾಹ್ನ 3 ಗಂಟೆಗೆ ಅಲಿಪಿರಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬೆದರಿಸಿದ್ದು,100 ಭಕ್ತರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ವರದಿ ತಿಳಿಸಿದೆ.
ಬೆದರಿಕೆ ಕರೆಬಂದ ಕೂಡಲೇ ಎಚ್ಚೆತ್ತ ಪೊಲೀಸರು ಅಲಿಪಿರಿ ಚೆಕ್‌ಪೋಸ್ಟ್‌ನಲ್ಲಿ ಸಂಪೂರ್ಣ ತಪಾಸಣೆ ನಡೆಸಿದ್ದಾರೆ. ಆದರೆ, ಭದ್ರತಾ ತಪಾಸಣೆ ವೇಳೆ ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ. ದೂರವಾಣಿ ಕರೆ ಕುರಿತು ಟಿಟಿಡಿಯ ವಿಜಿಲೆನ್ಸ್ ತಂಡ ಪೊಲೀಸರಿಗೆ ದೂರು ನೀಡಿದ ನಂತರ ಕರೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದಾದ ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದು, ಹುಸಿ ಬೆದರಕೆ ಕರೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಬಾಲಾಜಿಯನ್ನು ಪತ್ತೆ ಮಾಡಿ ವಶಕ್ಕೆ ಪಡೆಯಲಾಗಿದೆ. ಬಾಂಬ್ ಕರೆ ಮಾಡಿದ್ದನ್ನು ಆರೋಪಿ ಶನಿವಾರ ತಪ್ಪೊಪ್ಪಿಕೊಂಡಿದ್ದು, ಆ ಬಳಿಕ ಆತನನ್ನು ಬಂಧಿಸಲಾಗಿದೆ.