ಡೈಲಿ ವಾರ್ತೆ:23 ಆಗಸ್ಟ್ 2023
ಚಂದ್ರಯಾನ- 3 ಮಿಷನ್ ಸಕ್ಸಸ್: ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಕಾಲಿಟ್ಟ ವಿಕ್ರಮ್ ಲ್ಯಾಂಡರ್
ಬೆಂಗಳೂರು: ಇಸ್ರೋ ವಿಜ್ಞಾನಿಗಳ ಪರಿಶ್ರಮ, ಭಾರತೀಯರ ಪ್ರಾರ್ಥನೆ ಫಲವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿ ಪಡಿಸಿದ ಸಮಯಕ್ಕೆ ಸರಿಯಾಗಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಕಾಲಿಟ್ಟಿತು. ಈ ಐತಿಹಾಸಿಕ ಕ್ಷಣಕ್ಕೆ ಇಡೀ ವಿಶ್ವವೇ ಸಾಕ್ಷಿಯಾಯಿತು.
ಇಸ್ರೋ ಸಂಜೆ 6:04ರ ಹೊತ್ತಿಗೆ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರೈಸಿತು. ದಕ್ಷಿಣ ಆಫ್ರಿಕಾದಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ತಿಳಿಸಿದರು.
ಉಡಾವಣೆಯಿಂದ ಲ್ಯಾಂಡಿಂಗ್‌ವರೆಗೆ ಚಂದ್ರಯಾನ-3 ಕಾರ್ಯಾಚರಣೆ ಹೇಗಿತ್ತು?
ಜುಲೈ 14: ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಮಧ್ಯಾಹ್ನ 2:35 ರ ಹೊತ್ತಿಗೆ ಉಡಾವಣೆ. ಎಲ್‌ವಿಎಂ3 ಎಂ4 ಉಡ್ಡಯನ ವಾಹನವು ಚಂದ್ರಯಾನ-3 ಯೋಜನೆಯ ಉಪಕರಣಗಳನ್ನು ಹೊತ್ತು ನಿರ್ದಿಷ್ಟ ಕಕ್ಷೆಗೆ ಸೇರಿಸಿತು.
ಜುಲೈ 15: ಭೂಮಿ ಸುತ್ತಲಿನ ಮೊದಲ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41,762 ಕಿಮೀx226 ಕಿಮೀ ಕಕ್ಷೆಗೆ.
ಜುಲೈ 17: ಭೂಮಿ ಸುತ್ತಲಿನ ಎರಡನೇ ಹಂತದ ಕಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 41,603 ಕಿಮೀx226 ಕಿಮೀ ಕಕ್ಷೆಗೆ.
ಜುಲೈ 22: ಭೂಮಿ ಸುತ್ತಲಿನ 4ನೇ ಹಂತದ ಕ್ಷಕ್ಷೆಗೆ ಎತ್ತರಿಸುವ ಪ್ರಕ್ರಿಯೆ ಯಶಸ್ವಿ. 71,351 ಕಿಮೀx223 ಕಿಮೀ ಕಕ್ಷೆಗೆ.
ಆಗಸ್ಟ್ 1: ಚಂದ್ರಯಾನ-3 ಚಂದ್ರನ ಸುತ್ತಲಿನ ಕಕ್ಷೆಗೆ ಯಶಸ್ವಿ ಸೇರ್ಪಡೆ.
ಆಗಸ್ಟ್ 6: ಚಂದ್ರನ ಸುತ್ತಲಿನ ಕಕ್ಷೆಯನ್ನು ಕುಗ್ಗಿಸುವಲ್ಲಿ ಯಶಸ್ವಿ. 170 ಕಿಮೀ x 4,313 ಕಿಮೀ.
ಆಗಸ್ಟ್ 9: ಚಂದ್ರನ ಸುತ್ತಲಿನ ಕಕ್ಷೆಯನ್ನು ಮತ್ತೊಂದು ಹಂತಕ್ಕೆ ಇಳಿಸುವಲ್ಲಿ ಯಶಸ್ವಿ. 174 ಕಿಮೀ x 1,437 ಕಿಮೀ.
ಆಗಸ್ಟ್ 14: ಚಂದ್ರನ ಸಮೀಪ ತಲುಪಲು ಕಕ್ಷೆಯ ಮತ್ತೊಂದು ಸುತ್ತು ಇಳಿದ ನೌಕೆ. 150 ಕಿಮೀ x 177 ಕಿಮೀ.
ಆಗಸ್ಟ್ 16: ಚಂದ್ರನ ಸುತ್ತ ಪರಿಭ್ರಮಣೆಯ ಕೊನೆಯ ಹಂತವನ್ನು ಯಶಸ್ವಿಯಾಗಿ ಪೂರೈಸಿದ ಇಸ್ರೋ. 163 ಕಿಮೀ x 153 ಕಿಮೀ.
ಆಗಸ್ಟ್ 17: ಚಂದ್ರಯಾನ-3 ನೌಕೆಯಿಂದ ಪ್ರತ್ಯೇಕಗೊಂಡ ಪ್ರಜ್ಞಾನ್ ರೋವರ್ ಹೊತ್ತ ವಿಕ್ರಮ್ ಲ್ಯಾಂಡರ್.
ಆಗಸ್ಟ್ 18: ಚಂದ್ರಯಾನ-3 ಯಶಸ್ವಿಯಾಗಿ ಡಿಬೂಸ್ಟಿಂಗ್ ಕಾರ್ಯಾಚರಣೆ ನಡೆಸಿ ಕಕ್ಷೆಯ ಅಂತರವನ್ನು 113 ಕಿಮೀ x 157 ಕಿಮೀಗೆ ಇಳಿಸಿದೆ.
ಆಗಸ್ಟ್ 20: ಕೊನೆಯ ಹಂತದ ಕಕ್ಷೆಯನ್ನು ಹೊಂದಿಸುವ ಪ್ರಕ್ರಿಯೆ ಪೂರ್ಣ.