ಡೈಲಿ ವಾರ್ತೆ:23 ಆಗಸ್ಟ್ 2023

ನೃತ್ಯ ತರಬೇತಿಯಲ್ಲೂ ಹೆಸರು ಮಾಡಿದ್ದ ಪ್ರತಿಭಾವಂತ ಬಾಲಕ ಏಡಿ ಹಿಡಿಯಲು ಹೋಗಿ ನೀರುಪಾಲು!

ಮಡಿಕೇರಿ: ನೃತ್ಯದ ಮೂಲಕ ಭಾರತ ದೇಶವನ್ನು ಪ್ರತಿನಿಧಿಸುವ ಕನಸು ಕಂಡಿದ್ದ ಬಾಲಕನೋರ್ವ ಬುಧವಾರ ನಾಲೆಯಲ್ಲಿ ಏಡಿ ಹಿಡಿಯಲು ಹೋಗಿ ನೀರು ಪಾಲದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಜಲಾಶಯದ ನಾಲೆ ಬಳಿ ನಡೆದಿದೆ.

ಅನಿತ್ ನಾಲೆಗೆ ಬಿದ್ದು ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಇಂದು ಬೆಳಗ್ಗೆ 8:30ರ ಸುಮಾರಿಗೆ ಬ್ಯಾಡಗೂಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಕೇಂದ್ರದ ಬಳಿಯಿಂದ ಸ್ನೇಹಿತರೊಂದಿಗೆ ಶಾಲೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಹಾರಂಗಿ ನಾಲೆಯಲ್ಲಿ ಏಡಿಯೊಂದು ಅನಿತ್‌ಗೆ ಗೋಚರಿಸಿದೆ. ಈ ವೇಳೆ ಅನಿತ್ ತನ್ನ ಗೆಳೆಯರಿಗೆ ಏಡಿ ಹಿಡಿದುಕೊಂಡು ಬರುವೆ, ಸ್ವಲ್ಪ ಸಮಯ ಕಾಯಿರಿ ಎಂದು ನಾಲೆ ಸಮೀಪವೇ ಬಟ್ಟೆ, ಶಾಲಾ ಬ್ಯಾಗ್ ಇಟ್ಟು ಹೋಗಿದ್ದಾನೆ. ಆದರೆ ಆಕಸ್ಮಿಕವಾಗಿ ಕಾಲು ಜಾರಿ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಅನಿತ್ ಸ್ನೇಹಿತರು ಆತನನ್ನು ರಕ್ಷಣೆ ಮಾಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.

ನಂತರ ಶಾಲಾ ಬಾಲಕರು ಹಾಗೂ ಗ್ರಾಮಸ್ಥರು ನಾಲೆಯಲ್ಲಿ ಅನಿತ್ ಕಣ್ಮರೆಯಾಗಿರುವ ವಿಷಯ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿತ್‌ನ ಹುಡುಕಾಟಕ್ಕಾಗಿ ಹಾರಂಗಿ ಜಲಾಶಯದಿಂದ ನಾಲೆಗೆ ಬಿಟ್ಟಿರುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ಅಗ್ನಿ ಶಾಮಕ ದಳದವರು ಬಾಲಕನಿಗಾಗಿ ಶೋಧ ಕಾರ್ಯ ನಡೆಸಿ ಬಾಲಕನ ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಾಲೆಯಲ್ಲಿ ಬಿದ್ದು ಮೃತಪಟ್ಟ ಬಾಲಕ ಪ್ರತಿಭಾವಂತ ವಿದ್ಯಾರ್ಥಿಯಾಗಿದು, ನೃತ್ಯ ತರಬೇತಿಯಲ್ಲೂ ಹೆಸರು ಮಾಡಿದ್ದ. ಇತ್ತೀಚೆಗೆ ಚೀನಾದಲ್ಲಿ ನಡೆದ ನ್ಯಾಷನಲ್ ಲೆವೆಲ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಭಾಗವಹಿಸಿದ್ದ. ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಥೈಲೆಂಡ್‌ನಲ್ಲಿ ನಡೆಯಲಿರುವ ಇಂಟರ್ ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಗೂ ಭಾರತ ತಂಡದಿಂದ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದ.