ಡೈಲಿ ವಾರ್ತೆ:25 ಆಗಸ್ಟ್ 2023
ಸೌಜನ್ಯಪರ ನ್ಯಾಯಕ್ಕಾಗಿ ಕುಂದಾಪುರದಲ್ಲಿ ಬೃಹತ್ ಪ್ರತಿಭಟನೆ: ಮಂಜುನಾಥ, ಅಣ್ಣಪ್ಪ ಸ್ವಾಮಿಯ ಮುಖಕ್ಕೆ ಅತ್ಯಾಚಾರದ ರಕ್ತದ ಕಲೆ ಹಚ್ಚಿದವರನ್ನು ಶಿಕ್ಷಿಸುವುದಕ್ಕಾಗಿಯೇ ನಮ್ಮ ಹೋರಾಟ – ಮಹೇಶ್ ತಿಮರೋಡಿ
ಕುಂದಾಪುರ: ಅಧರ್ಮ ಆಚರಣೆಯ ಯಾವೊಬ್ಬನೂ ಈ ಭೂಮಿ ಮೇಲೆ ಬದುಕುವ ಹಕ್ಕನ್ನು ಹೊಂದಿಲ್ಲ ಎಂದು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಸೌಜನ್ಯ ಪರ ನ್ಯಾಯಕ್ಕಾಗಿನ ಹೋರಾಟ ಸಮಿತಿ ಕುಂದಾಪುರ – ಬೈಂದೂರು ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರಿ ವೃತ್ತದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು.
ಧರ್ಮಸ್ಥಳವೆನ್ನುವುದು ನ್ಯಾಯ ಸ್ಥಾನ ಮಂಜುನಾಥ, ಅಣ್ಣಪ್ಪ ಸ್ವಾಮಿ ಸೌಜನ್ಯಳಿಗೆ ಇವತ್ತಲ್ಲದಿದ್ದರೇ, ನಾಳೆಯಾದರೂ ನ್ಯಾಯ ಒದಗಿಸಿ ಕೊಡುತ್ತಾರೆ. ಮಂಜುನಾಥ, ಅಣ್ಣಪ್ಪ ಸ್ವಾಮಿ ಈ ನ್ಯಾಯದ ಹೋರಾಟವನ್ನು ನನ್ನ ತಲೆ ಮೇಲೆ ಹಾಕಿದ್ದಾರೆ. ಅದಕ್ಕಾಗಿ ನಾನು 11 ವರ್ಷದಿಂದ ಹೋರಾಟ ಮಾಡುತ್ತಿದ್ದೇನೆ . ಮುಂದೆ ಎಷ್ಟು ಹೋರಾಟ ಮಾಡುವುದಕ್ಕೂ ನಾನು ಸಿದ್ದ. ನನಗೆ ವೇದಿಕೆಯಲ್ಲಿ ಮಾತನಾಡುವ ತೀಟೆಯಲ್ಲ, ಹೆಣ್ಣು ಮಗುವಿಗೆ ನ್ಯಾಯ ಕೊಡುವುದಷ್ಟೇ ನನ್ನ ಗುರಿ-ಎಂದು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಆಕ್ರೋಶ ಹೊರ ಹಾಕಿದರು.
ಮಂಜುನಾಥ, ಅಣ್ಣಪ್ಪ ಸ್ವಾಮಿಯ ಮುಖಕ್ಕೆ ಅತ್ಯಾಚಾರದ ರಕ್ತದ ಕಲೆ ಹಚ್ಚಿದವರನ್ನು ಶಿಕ್ಷಿಸುವುದಕ್ಕಾಗಿಯೇ ನಮ್ಮ ಹೋರಾಟ. ನ್ಯಾಯ ಸಿಗುವವರೆಗೆ ರಾಜ್ಯಾದ್ಯಂತ, ರಾಷ್ಟ್ರಾದ್ಯಂತ ಹೋರಾಟ ಮಾಡಲಿದ್ದೇವೆ. ಇದಕ್ಕೆ ಯಾರಿಂದಲೂ ಅಡ್ಡಿಯಾಗಲು ಸಾಧ್ಯವಿಲ್ಲ. ಹಿಂದೂ ಧರ್ಮದ ತಳಪಾಯ ಅಲುಗಾಡಲು ನಾವು ಬಿಡುವುದಿಲ್ಲ. ಧರ್ಮಸ್ಥಳದಲ್ಲಿ ಧಾರ್ಮಿಕತೆ ಅಲುಗಾಡಲು ಆರಂಭಿಸಿದೆ. ಅದನ್ನು ಸರಿಪಡಿಸುವುದು ನಮ್ಮ ಗುರಿ. ನಾವು ಸನಾತನ ಹಿಂದೂ ಧರ್ಮದ ಪ್ರತಿಪಾದಕರು. ಜನರು, ಧರ್ಮದ ಮುಂದೆ ಯಾವುದು ಇರುವುದಿಲ್ಲ ಎಂದರು.
ಸತ್ಯ ನ್ಯಾಯ ನೀತಿ ಎಲ್ಲಿದೆ. ಧರ್ಮಸ್ಥಳದಲ್ಲಿಯೇ ನ್ಯಾಯವಿಲ್ಲ ಎಂದಾದರೆ ಹೇಗೆ? ಯಾರು ಈ ಅತ್ಯಾಚಾರ ಕೊಲೆ ಮಾಡಿದವರು. ಸಾಮೂಹಿಕವಾಗಿ ಅತ್ಯಚಾರ ಮಾಡಿದ ಪಾಪಿಗಳನ್ನು ವ್ಯವಸ್ಥಿತವಾಗಿ ರಕ್ಷಣೆ ಮಾಡಲಾಗಿದೆ. ಅತ್ಯಂತ ಘೋರವಾಗಿ, ಮೃಗೀಯವಾಗಿ ಅತ್ಯಾಚಾರ ಮಾಡಲಾಗಿದೆ. ಇದು ಮನುಷ್ಯತ್ವವೇ ತಲೆ ತಗ್ಗಿಸುವ ಘಟನೆ ಎಂದರು.
ಧರ್ಮ ಇರುವುದು ಒಂದೇ ಅದೇ ಹಿಂದು ಧರ್ಮ. ಇದರೊಳಗೆ ಬೇರೆ ಬೇರೆ ಪಂಗಡಗಳು ಇದೆ. ಈಗ ನಾವು ಅಲ್ಪಸಂಖ್ಯಾತರು ಎನ್ನುವುದಕ್ಕೆ ಅರ್ಥವಿಲ್ಲ. ದಿನಕ್ಕೊಂದು ಕಾನೂನು ಮಾಡಿ ದೊಡ್ಡವರಿಗೊಂದು ಕಾನೂನು, ಬಡವರಿಗೊಂದು ಕಾನೂನು ರೂಪಿಸುವುದು ಕಾಣುತ್ತೇವೆ. ಆದರೆ ಈ ವಿಷಯದಲ್ಲಿ ಜನಳಗೇ ತೀರ್ಮಾನ ತಗೆದುಕೊಳ್ಳಬೇಕು ಎಂದರು.
ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿ ರಾಜ್ಯ ಸರ್ಕಾರ ಈ ಪ್ರಕರಣದಿಂದ ಕೈ ತೊಳೆದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದು ರಾಜ್ಯ ಸರ್ಕಾರದ ಮೈಂಡ್ ಗೇಮ್, ಸೇಫ್ ಗೇಮ್. ಯಾವ ಸರ್ಕಾರ ಏನೇ ಈ ಪ್ರಕರಣದಲ್ಲಿ ಆಟ ಆಡಿದರೂ ನ್ಯಾಯ ಸಿಗುವ ತನಕ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ಸೆ.3ರಂದು ಬೆಳ್ತಂಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ. ಲಕ್ಷಾಂತರ ಸಂಖ್ಯೆಯಲ್ಲಿ ಸೇರಲಿದ್ದಾರೆ. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಆರೋಪಿಗಳನ್ನು ರಕ್ಷಣೆ ಮಾಡಿದವರಿಗೂ ಶಿಕ್ಷೆಯಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.
ಸೌಜನ್ಯ ತಾಯಿ ಕುಸುಮವತಿ ಮಾತನಾಡಿ, ನನ್ನ ಮಗಳಿಗಾಗಿ ನ್ಯಾಯ ಕೊಡಿಸಿ ಎಂದು ಕೇಳುತ್ತಲೇ ಬಂದಿದ್ದೇನೆ. ಅತ್ಯಂತ ಘೋರವಾಗಿ ಅತ್ಯಾಚಾರವೆಸಗಿ ನನ್ನ ಮಗಳನ್ನು ಸಾಯಿಸಿದ ಪಾಪಿಗಳಿಗೆ ಶಿಕ್ಷೆಯಾಗಬೇಕು. ನಾವು ಆರೋಪ ಮಾಡುವವರನ್ನು ತನಿಖೆ ಮಾಡಲಿ, ಈ ಪ್ರಕರಣದ ಮರು ತನಿಖೆಯಾಗಲಿ. ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕಾಗಿ ಬೆದರಿಕೆಗಳನ್ನು ಎದುರಿಸಿ ಸಾಕಾಯ್ತು. ಇನ್ನಾದರೂ ಸರ್ಕಾರ ನ್ಯಾಯ ಒದಗಿಸಿ ಕೊಡುವ ಮನಸ್ಸು ಮಾಡಲಿ ಎಂದರು.
ಕಾರ್ಯಕ್ರಮ ಸಂಘಟಕ ಸುಧೀರ್ ಮಲ್ಯಾಡಿ ಸ್ವಾಗತಿಸಿ, ವಂದಿಸಿದರು.
ಕಾರ್ಯಕ್ರಮಕ್ಕೂ ಮೊದಲು ನೆಹರು ಮೈದಾನದಿಂದ ಬೃಹತ್ ಮೆರವಣಿಗೆ ನಡೆಯಿತು. ಸುಮಾರು ಐದು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.