ಡೈಲಿ ವಾರ್ತೆ:28 ಆಗಸ್ಟ್ 2023
ಶಿರೂರು ಸಮುದ್ರದಲ್ಲಿ ದೋಣಿ ದುರಂತ: ಇಬ್ಬರು ಮೀನುಗಾರರ ಮೃತದೇಹ ಪತ್ತೆ
ಬೈಂದೂರು: ಶಿರೂರು ಅಳ್ವೆಗದ್ದೆ ಎಂಬಲ್ಲಿ ಆ.27ರಂದು ಸಂಜೆ ವೇಳೆ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿಯಿಂದ ನೀರಿಗೆ ಬಿದ್ದು ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಮೃತದೇಹವು ಇಂದು (ಸೋಮವಾರ) ನಸುಕಿನ ವೇಳೆ ಪತ್ತೆಯಾಗಿದೆ.
ದೋಣಿ ಮಗುಚಿ ಬಿದ್ದ 300 ಮೀಟರ್ ವ್ಯಾಪ್ತಿಯಲ್ಲಿ ಗಂಗೊಳ್ಳಿ ಮುಸ್ತಾಫಾ ಅವರ ಮಗ ಮುಹಮ್ಮದ್ ಮುಸಾಬ್(22) ಅವರ ಮೃತದೇಹವು ನಸುಕಿನ ವೇಳೆ 1.30ಕ್ಕೆ ಮತ್ತು ಬಾವು ನೂರುಲ್ ಅಮೀನ್ ಅವರ ಮಗ ನಝಾನ್ (24) ಅವರ ಮೃತದೇಹವು ನಸುಕಿನ ವೇಳೆ 2.45ರ ಸುಮಾರಿಗೆ ದೊರೆತಿದೆ.
ಇವರು ಅಲ್ಲಿ ಮುಹಮ್ಮದ್ ಯಾಸೀನ್, ಸಾರಾಂಗ್ ಮುಸ್ತಾಕ್ ಎಂಬವ ರೊಂದಿಗೆ ಕೈರಂಪಣಿ ಬಲೆಯನ್ನು ಹಾಕಿ ಮೀನುಗಾರಿಕೆ ಮಾಡಲು ಶಿರೂರು ಗ್ರಾಮದ ಅಳಿವೆಗದ್ದೆ ಕಿರು ಬಂದರಿಗೆ ತೆರಳಿದ್ದು, ಅಲ್ಲಿ ಮುಸಾಬ್ ಹಾಗೂ ನಝಾನ್, ಕುರ್ಡಿ ಸಾಧಿಕ್ ಎಂಬವರ ಸೈಫಾ ಎಂಬ ದೋಣಿಯಲ್ಲಿ ಬಲೆಯನ್ನು ಬಿಡುತ್ತಾ ತೀರದಿಂದ ಸುಮಾರು 100 ಮೀಟರ್ ದೂರ ಹೋಗಿದ್ದರು. ಬಲೆಯನ್ನು ಬಿಡುತ್ತಿರುವಾಗ ದೋಣಿಯು ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿತ್ತೆನ್ನಲಾಗಿದೆ.
ಇದರಿಂದ ದೋಣಿಯಲ್ಲಿದ್ದ ಇವರಿಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆ ಯಾದರು. ಸ್ಥಳಕ್ಕೆ ಬೈಂದೂರು ಎಸೈ ನಿರಂಜನ ಗೌಡ, ಅಗ್ನಿಶಾಮಕದಳ, ಕರಾವಳಿ ಕಾವಲು ಪೊಲೀಸರು, ತಹಶೀಲ್ದಾರ್ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಿರಂತರ ಹುಡುಕಾಟದ ಬಳಿಕ ಮೃತದೇಹವು ನಸುಕಿನ ವೇಳೆ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.