ಡೈಲಿ ವಾರ್ತೆ:30 ಆಗಸ್ಟ್ 2023

ಕಾಂಗ್ರೆಸ್ ಸರ್ಕಾರದ 4ನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಚಾಲನೆ ನೀಡಿದ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಮೈಸೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು (ಆ.30) ಚಾಲನೆ ನೀಡಿದರು. ಖರ್ಗೆ ಅವರಿಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಸಾಥ್ ನೀಡಿದರು.

ಸಾಂಸ್ಕೃತಿಕ ನಗರಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಸಮಾರಂಭದಲ್ಲಿ ರಿಮೋಟ್ ಬಟನ್ ಒತ್ತುವ ಮೂಲಕ 2000 ರೂಪಾಯಿ ಚೆಕ್ ಪ್ರದರ್ಶನ ಮಾಡುವುದರೊಂದಿಗೆ ಗೃಹಲಕ್ಷ್ಮಿ ಯೋಜನೆಗೆ ಮಲ್ಲಿಕಾರ್ಜುನ ಖರ್ಗೆ ಅವರು ಚಾಲನೆ ನೀಡಿದರು.

ಇದಕ್ಕೂ ಮುನ್ನ ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮಂಡಕಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ಸಿಎಂ ಸಿದ್ದರಾಮಯ್ಯ, ಸಚಿವರುಗಳು ಹಾಗೂ ಸ್ಥಳೀಯ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಕಾರ್ಯಕ್ರಮ ನಡೆಯುತ್ತಿರುವ ಮಹಾರಾಜ ಕಾಲೇಜು ಆವರಣ ವೇದಿಕೆಗೆ ಆಗಮಿಸಿದರು. ವೇದಿಕೆಗೆ ಆಗಮಿಸಿದ ರಾಹುಲ್ ಜನರತ್ತ ಕೈ ಬೀಸಿದರು.

ಬಳಿಕ ನಾಡಗೀತೆ ಹಾಡುವುದರೊಂದಿಗೆ ಹಾಗೂ ದೀಪ ಬೆಳಗುವ ಮೂಲಕ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಚಿವ ಮಹಾದೇವಪ್ಪ ಅವರು ಸಂವಿಧಾನದ ಪೀಠಿಕೆಯನ್ನು ಬೋಧನೆ ಮಾಡಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ‌ ಜನರಲ್ ಸೆಕ್ರೆಟರಿ ವೇಣುಗೋಪಾಲ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರಾದ ಮುನಿಯಪ್ಪ, ಪರಮೇಶ್ವರ್, ಸತೀಶ್ ಜಾರಕಿಹೋಳಿ, ಕೆ.ಎನ್. ರಾಜಣ್ಣ, ಮಹಾದೇವಪ್ಪ, ಚಲುವರಾಯಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಏನಿದು ಗೃಹಲಕ್ಷ್ಮಿ ಯೋಜನೆ?
ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯು ಮನೆ ಯಜಮಾನಿಗೆ ಉಚಿತ ಹಣ ನೀಡುವ ಯೋಜನೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋ ಮುನ್ನ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಈ ಯೋಜನೆ ಅಡಿಯಲ್ಲಿ ಪ್ರತಿ ಮನೆಯ ಯಜಮಾನಿಗೆ 2000 ರೂ. ನೀಡಲಾಗುತ್ತದೆ. ಒಂದೇ ಮನೆಯಲ್ಲಿ ಅತ್ತೆ-ಸೊಸೆ ಇದ್ದಲ್ಲೆ, ಮನೆಯ ಯಜಮಾನಿ ಯಾರು ಎಂಬುದನ್ನು ಅವರೇ ತೀರ್ಮಾನ ಮಾಡಿಕೊಳ್ಳಬೇಕು. ಈಗಾಗಲೇ 1.28 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಇಂದು ಎಲ್ಲರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ.

ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಯುವಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳಿಗೆ ಅದ್ಧೂರಿ ಚಾಲನೆ ದೊರೆತಿದೆ. ಇಂದು ಗೃಹಲಕ್ಷ್ಮಿ ಯೋಜನೆಗೆ Let’s ಸಿಕ್ಕಿದೆ. ಉಳಿದ ಯುವನಿಧಿ ಯೋಜನೆ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸರ್ಕಾರ ತಿಳಿಸಿದೆ.