ಡೈಲಿ ವಾರ್ತೆ:31 ಆಗಸ್ಟ್ 2023

ರಾಜ್ಯದ 35 ಗ್ರಾಮದ ಜನರಿಗೆ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಯೋಜನೆಯಲ್ಲಿ ಉಡುಪಿ ಜಿಲ್ಲೆಯಿಂದ ಈ ಕೋಟತಟ್ಟು ಗ್ರಾಮ ಪಂಚಾಯತ್ ಮಾತ್ರ ಆಯ್ಕೆಯಾಗಿರುವುದು ನಮ್ಮ ಗ್ರಾಮಸ್ಥರಿಗೆ ಸಂದ ಗೌರವ – ಅಧ್ಯಕ್ಷ ಸತೀಶ್ ಕುಂದರ್

ಕೋಟ : “ಗ್ರಾಮಗಳು ದೇಶದ ಜೀವನಾಡಿ. ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಾಮಗಳ ಅಭಿವೃದ್ಧಿಯು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮವಾಸಿಗಳೇ ಗ್ರಾಮದ ಅಭಿವೃದ್ಧಿಗೆ ಮುಖ್ಯ ಕಾರಣರಾಗುತ್ತಾರೆ. ಗ್ರಾಮದ ಪ್ರತಿಯೊಬ್ಬರೂ ತಮ್ಮ ದೈನಂದಿನ ಚಟುವಟಿಕೆಗಳಿಗೆ ಅವಶ್ಯಕವಾಗಿರುವ ಜ್ಞಾನ ಮತ್ತು ಸಾಮರ್ಥ್ಯಗಳನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಅದರಲ್ಲೂ ಡಿಜಿಟಲ್ ಜ್ಞಾನದ ಬಗ್ಗೆ ಅರಿವನ್ನು ಪಡೆದುಕೊಳ್ಳುವುದು ಹಾಗೂ ಪಡೆದ ಜ್ಞಾನವನ್ನು ತಮ್ಮ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದು ಸಹ ಬಹಳ ಮುಖ್ಯ. ನಗರ ಪ್ರದೇಶದ ಸಮುದಾಯಕ್ಕೆ ಹೋಲಿಸಿದರೆ, ಗ್ರಾಮೀಣ ಪ್ರದೇಶದ ಸಮುದಾಯಗಳಲ್ಲಿ ಡಿಜಿಟಲ್ ವ್ಯವಸ್ಥೆ ಬಳಕೆಯ ಅರಿವು ಕಡಿಮೆ ಇರುತ್ತದೆ. ಇಲ್ಲಿ ಲಭ್ಯವಿರುವ ಡಿಜಿಟಲ್ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಲು ಪೂರಕವಾದ ತರಬೇತಿಯ ಅವಶ್ಯಕತೆ ಇದೆ. ಕರ್ನಾಟಕ ಸರಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಶಿಕ್ಷಣ ಫೌಂಡೇಶನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ, ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿಯಲ್ಲಿ ರಾಜ್ಯದ 35 ಗ್ರಾಮಗಳ ಜನರಿಗೆ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಯೋಜನೆಯನ್ನು ಮಾಡಲಾಗಿದೆ .

ಉಡುಪಿ ಜಿಲ್ಲೆಯಿಂದ ಈ ಯೋಜನೆಗೆ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ಮಾತ್ರ ಆಯ್ಕೆಯಾಗಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ” – ಎಂದು ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಸತೀಶ್ ಕುಂದರ್ ಹೇಳಿದರು.

ಗ್ರಾಮದಲ್ಲಿರುವ ಎಲ್ಲಾ ಜನರು ತಮ್ಮ ನಿತ್ಯಜೀವನದ ಚಟುವಟಿಕೆಗಳಲ್ಲಿ ವ್ಯವಹರಿಸಲು ಬೇಕಾದ ಡಿಜಿಟಲ್ ಸಾಕ್ಷರತೆ ಬಗ್ಗೆ ಅರಿವನ್ನು ಪಡೆದುಕೊಳ್ಳುವುದು ಹಾಗೂ ಅವುಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಸಂಪೂರ್ಣ ಡಿಜಿಟಲ್ ಸಾಕ್ಷರತೆ ಹೊಂದುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಡಿಜಿಟಲ್ ಸಾಧನಗಳನ್ನು ಬಳಸುವ ಕುರಿತು ಹಾಗೂ, ಆನ್‌ಲೈನ್ ಫ್ಲಾಟ್‌ಫಾರಂಗಳನ್ನು ಸುರಕ್ಷಿತವಾಗಿ ಹೇಗೆ ಬಳಕೆ ಮಾಡಬಹುದು ಮತ್ತು ಡಿಜಿಟಲ್ ಸೇವೆಗಳನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಮಾಹಿತಿಗಳ ಪ್ರಯೋಜನಗಳನ್ನು ಈ ಕಾರ್ಯಕ್ರಮದ ಮೂಲಕ ಪಡೆದುಕೊಳ್ಳಬಹುದು.
ಮುಖ್ಯವಾಗಿ ಸ್ಮಾರ್ಟ್ ಫೋನ್ ಬಳಕೆ, ಡಿಜಿಟಲ್ ಡಿವೈಸ್, ಸರ್ಚ್ ಮತ್ತು ಅಂತರ್ಜಾಲ ಸುರಕ್ಷತೆ, ಸಂವಹನ ಮಾಧ್ಯಮ ಮತ್ತು ಆನ್‌ಲೈನ್ ಫ್ಲಾಟ್‌ಫಾರಂಗಳು, ಇ- ಬ್ಯಾಂಕಿಂಗ್ ಬಗ್ಗೆ ಹಾಗೂ ಇತರ ಪ್ರಮುಖ ವಿಷಯಗಳ ಬಗ್ಗೆ ಗ್ರಾಮದ ನಾಗರಿಕರಿಗೆ ಮಾಹಿತಿಗಳು ದೊರೆಯುತ್ತದೆ. ಇದರ ಸಂಪೂರ್ಣ ಪ್ರಯೋಜನವನ್ನು ಕೋಟತಟ್ಟು ಗ್ರಾಮದ ನಾಗರಿಕರು ಪಡೆದುಕೊಳ್ಳಬೇಕಾಗಿ ಕೋಟತಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ರವೀಂದ್ರ ರಾವ್ ಮನವಿ ಮಾಡಿದ್ದಾರೆ.