ಡೈಲಿ ವಾರ್ತೆ:01 ಸೆಪ್ಟೆಂಬರ್ 2023

ವರದಿ: ರವಿತೇಜ ಕಾರವಾರ

ಹಿಂದೂ ಧರ್ಮದ ಬಗ್ಗೆ ಅವಹೇಳನ: ದಲಿತ ಮುಖಂಡನಿಗೆ ನ್ಯಾಯಾಂಗ ಬಂಧನ!

ಕಾರವಾರ: ಹಿಂದೂ ಧರ್ಮದ ಬಗ್ಗೆ, ಹಿಂದೂ ದೇವ ದೇವತೆಗಳ ಬಗ್ಗೆ ಅವಹೇಳನಕಾರಿಯಾಗಿ, ತುಚ್ಛವಾಗಿ ಮಾತನಾಡಿದ ದಲಿತ ಮುಖಂಡ ಎಲಿಷಾ ಎಲಕಪಾಟಿಯನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದ ಹರಿದೇವನಗರದ ನಿವಾಸಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಎಲಿಷಾ ಎಲಕಪಾಟಿ ಎಂಬಾತನು ಹಿಂದೂ ಧರ್ಮ, ಹಿಂದೂ ದೇವರು, ಪ್ರಧಾನಿ ಮೋದಿ ಕುರಿತು ತುಚ್ಛವಾಗಿ ಮಾತನಾಡಿದ ವಿಡಿಯೋ ತುಣುಕುಗಳು ಗುರುವಾರ ವೈರಲ್ ಆಗಿತ್ತು. ಈ ಬಗ್ಗೆ ಅಂದು ಶಿರವಾಡ ಗ್ರಾಮದ ದಲಿತ ಸಮುದಾಯದವರು ಹಾಗೂ ಇತರ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಘಟನೆಯ ಬಳಿಕ ಸುದ್ದಿಗೋಷ್ಟಿ ನಡೆಸಿದ್ದ ಎಲಿಷಾ ಎಲಕಪಾಟಿ ಈ ಬಗ್ಗೆ ಕ್ಷಮೆಯನ್ನೂ ಕೋರಿದ್ದರು. ಆದರೆ ಸಂಜೆ ಕಾರವಾಋ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದರಿಂದ ಆರೋಪಿ ತಲೆಮರೆಸಿಕೊಂಡಿದ್ದನು.
ಇದರಿಂದ ಆಕ್ರೋಶಗೊಂಡ ಹಿಂದೂಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಶುಕ್ರವಾರ ಪ್ರತಿಭಟನೆ ನಡೆಸಿದ್ದರು. ಅಲ್ಲದೇ ವಿಡಿಯೋ ವೈರಲ್ ಆದ ಬಗ್ಗೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿದ್ದವು. ಕೋಮುಸುಷ್ಮಾ ವಿಷಯವಾಗಿರುವ ಹಿನ್ನಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯವು ಸೆ.12ರವರೆಗೆ ನ್ಯಾಯಂಗ ಬಂಧನ ವಿಧಿಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.