ಡೈಲಿ ವಾರ್ತೆ:04 ಸೆಪ್ಟೆಂಬರ್ 2023
ಬಜಪೆ: ಮುಸ್ಲಿಂ ಯುವಕನ ಮೇಲೆ ಸಂಘಪರಿವಾರದಿಂದ ಹಲ್ಲೆ; ಎಸ್.ಡಿ.ಪಿ.ಐ ಖಂಡನೆ
ಮಂಗಳೂರು: ಬಜಪೆ ವ್ಯಾಪ್ತಿಯ ಕಳವಾರು ಎಂಬಲ್ಲಿ ಓರ್ವ ಮುಸ್ಲಿಂ ಯುವಕನ ಮೇಲೆ ಬಜರಂಗಿ ಗೂಂಡಾಗಳಿಂದ ಮರಣಾಂತಿಕ ಹಲ್ಲೆ ನಡೆದಿದ್ದು, ಎಸ್.ಡಿ.ಪಿ.ಐ ಮೂಡಬಿದರೆ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಆಸಿಫ್ ಕೋಟೆಬಾಗಿಲು ತೀವ್ರವಾಗಿ ಖಂಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘಪರಿವಾರದಿಂದ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಇಂದು ಸಫ್ವಾನ್ ಎಂಬ ಅಮಾಯಕ ಯುವಕನ ಮೇಲೆ ಶಸ್ತ್ರಾಸ್ತ್ರಗಳಿಂದ ಮರಣಾಂತಿಕವಾಗಿ ಹಲ್ಲೆ ನಡೆದಿರುವುದು ಕರಾವಳಿ ಪ್ರದೇಶದ ಕಾನೂನು ಸುವ್ಯವಸ್ಥೆ ದುರ್ಬಲಗೊಂಡಿದೆ ಅಥವಾ ತೀರಾ ಹದಗೆಟ್ಟಿದೆ ಎಂಬುವುದಕ್ಕೆ ಒಂದು ಉತ್ತಮ ನಿದರ್ಶನ ಎಂದು ಕಿಡಿಕಾರಿದರು.
ಈ ಮೊದಲು ಕಾಂಗ್ರೆಸ್ ತಾವು ಒಂದು ವೇಳೆ ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುತ್ತೇವೆ ಎನ್ನುತ್ತಾರೆ. ಪ್ರಚೋದನಕಾರಿ ಭಾಷಣ ಮಾಡುವವರನ್ನು ಒದ್ದು ಒಳಗೆ ಹಾಕುತ್ತೇವೆ ಎಂದವರು ಈಗ ಹಲವು ಕಡೆಗಳಲ್ಲಿ ತೀವ್ರ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಈ ಕಾಂಗ್ರೆಸ್ ಸರಕಾರ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ನೋಡಬೇಕು ಎಂದು ಆಸಿಫ್ ಕೋಟೆಬಾಗಿಲು ಪ್ರಶ್ನೆ ಮಾಡಿದರು.
ಇಂದು ನಡೆದ ಈ ಮಾರಣಾಂತಿಕ ಹಲ್ಲೆಯಲ್ಲಿ ಎಲ್ಲಾ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ ಗೂಂಡಾ ಕಾಯ್ದೆ ಹಾಕಬೇಕು. ಅದು ತಪ್ಪಿದಲ್ಲಿ ಬ್ರಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳುತ್ತೇವೆ ಎಂದು ಆಸಿಫ್ ಕೋಟೆಬಾಗಿಲು ಎಚ್ಚರಿಕೆ ನೀಡಿದರು.