ಡೈಲಿ ವಾರ್ತೆ:04 ಸೆಪ್ಟೆಂಬರ್ 2023

ಜ್ಯೂಸ್ ಎಂದು ಕೀಟನಾಶಕ ಕುಡಿದು 2 ವರ್ಷದ ಮಗು ಸಾವು.!

ರಾಮನಗರ:ಜಮೀನಿಗೆ ಸಿಂಪಡಣೆ ಮಾಡಲು ಇಟ್ಟಿದ್ದ ಕೀಟನಾಶಕವನ್ನು ಜ್ಯೂಸ್‌ ಎಂದುಕೊಂಡು ಕುಡಿದ 2 ವರ್ಷದ ಮಗು ಸಾವನ್ನಪ್ಪಿದ ಘಟನೆ ರಾಮನಗರ ಜಿಲ್ಲೆಯ ಕೃಷ್ಣಾಪುರದಲ್ಲಿ ನಡೆದಿದೆ.

ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ಮನೆಯಲ್ಲಿ ಇಟ್ಟಿದ್ದ ಕೀಟನಾಶಕವನ್ನು ಜ್ಯೂಸ್‌ ಎಂದು ಕುಡಿದು 2 ವರ್ಷದ ಮಗು ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.

ಹನುಮಂತು ಹಾಗೂ ಪುಷ್ಪ ದಂಪತಿಯ ಪುತ್ರ ಯಶ್ವಿಕ್ (2) ಮೃತ ದುರ್ದೈವಿ.
ಜಮೀನಿಗೆ ಸಿಂಪಡಿಸಲು ತಂದಿದ್ದ ಕೀಟನಾಶಕವನ್ನು, ಜ್ಯೂಸ್‌ ಬಾಟ್ಲಿ ಎಂದು ತಿಳಿದುಕೊಂಡು ಓಪೆನ್‌ ಮಾಡಿದೆ. ನಂತರ, ಅದರಲ್ಲಿದ್ದ ವಿಷವನ್ನು ಜ್ಯೂಸ್‌ ಎಂದುಕೊಂಡು ಸೇವನೆ ಮಾಡಿದೆ. ಕ್ರಿಮಿನಾಶಕ ಸೇವನೆ ಬಳಿಕ ಹೊಟ್ಟೆ ನೋವಿನಿಂದ ಮಗು ಅಸ್ವಸ್ಥಗೊಂಡು ಬಿದ್ದಿದೆ. ಪೋಷಕರು ಬಾಯಿಯ ವಾಸನೆ ನೋಡಿದಾಗ ವಿಷ ಸೇವನೆ ಆಗಿರುವುದು ತಿಳಿದಿದೆ. ಕೂಡಲೇ ಮಗುವನ್ನ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಂಡ್ಯದ ಆಸ್ಪತ್ರೆಯಲ್ಲಿ ಒಂದು ದಿನಗಳ ಕಾಲ ನಿರಂತರವಾಗಿ ಚಿಕಿತ್ಸೆಯನ್ನು ನೀಡಲಾಗಿದೆ. ಆದರೆ, ಮಗುವಿನ ಸ್ಥಿತಿ ಮಾತ್ರ ಚೇತರಿಕೆ ಆಗದೆ ಇಂದು ಮಧ್ಯಾಹ್ನದ ವೇಳೆಗೆ ಚಿಕಿತ್ಸೆ ಫಲಿಸದೇ ಮಗು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.