ಡೈಲಿ ವಾರ್ತೆ:05 ಸೆಪ್ಟೆಂಬರ್ 2023

ಹಾಲಿನ ಡೈರಿ ರಾಜಕೀಯ: ಪಶು ಸಂಗೋಪನಾ ಸಚಿವರ ಸ್ವಕ್ಷೇತ್ರದಲ್ಲೇ ಹಾಲು ಚರಂಡಿ ಪಾಲು

ಮೈಸೂರು: ಬಣ ರಾಜಕೀಯದಿಂದಾಗಿ ಪಶುಸಂಗೋಪನಾ ಸಚಿವರ ತವರಲ್ಲೇ ಹಾಲು ಚರಂಡಿ ಪಾಲಾಗಿರುವ ಘಟನೆ ಪಿರಿಯಾಪಟ್ಟಣದ ಚಿಟ್ಟೇನಹಳ್ಳಿಯಲ್ಲಿ ನಡೆದಿದೆ.

ಹಾಲು ತೆಗೆದುಕೊಳ್ಳುವ ವಿಚಾರದಲ್ಲಿ ರಾಜಕೀಯ ಮಾಡಿರುವುದರಿಂದ ಹಾಲನ್ನು ಗ್ರಾಮಸ್ಥರು ಚರಂಡಿಗೆ ಸುರಿದಿದ್ದಾರೆ.

ಗ್ರಾಮಸ್ಥರಿಂದ ಡೈರಿಯ ಕಾರ್ಯದರ್ಶಿ ಹಾಲು ಪಡೆಯುತ್ತಿಲ್ಲ. ಪಕ್ಕದ ಬೇರೆ ಡೈರಿಗೆ ಹೋಗಿ ಹಾಲು ಹಾಕುವಂತೆ ತಾಕೀತು ಮಾಡಿದ ಕಾರಣ ದಿಕ್ಕು ತೋಚದೆ ಗ್ರಾಮಸ್ಥರು ಹಾಲನ್ನು ಚರಂಡಿಗೆ ಸುರಿದಿದ್ದಾರೆ. ಈ ವೇಳೆ ಪಶು ಸಂಗೋಪನಾ ಸಚಿವ ವೆಂಕಟೇಶ್ ಅವರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈವರೆಗೂ ಗ್ರಾಮದಲ್ಲೇ ಹಾಲು ಸ್ವೀಕಾರ ಮಾಡುತ್ತಿದ್ದ ಕಾರ್ಯದರ್ಶಿ ಸಚಿವ ವೆಂಕಟೇಶ್ ಅವರ ಕುಮ್ಮಕ್ಕಿನಿಂದ ಹಾಲು ಪಡೆಯದೆ ಮುಖ್ಯ ರಸ್ತೆ ದಾಟಿ ಮತ್ತೊಂದು ಬಿಎಂಸಿ ಕೇಂದ್ರಕ್ಕೆ ಹಾಲು ಹಾಕುವಂತೆ ತಾಕೀತು ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮತ್ತೊಂದು ಕೇಂದ್ರಕ್ಕೆ ಹಾಲು ಕೊಂಡೊಯ್ಯಲು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಮುಖ್ಯ ರಸ್ತೆ ದಾಟಿ ಹಾಲು ಹಾಕಲು ಸಮಸ್ಯೆಯಾಗುತ್ತದೆ. ರಸ್ತೆ ದಾಟುವ ವೇಳೆ ಅಪಘಾತವಾಗಿದೆ. ಇದರಿಂದ ಒಂದೇ ಡೈರಿಯಲ್ಲಿ ಹಾಲು ಹಾಕಿಸಿಕೊಳ್ಳಬೇಕು ಎಂದು ರೈತರು ಮನವಿ ಮಾಡಿದ್ದಾರೆ.