ಡೈಲಿ ವಾರ್ತೆ:06 ಸೆಪ್ಟೆಂಬರ್ 2023
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ : ಹಿರಿಯ ಪ್ರಾಧ್ಯಾಪಕರಿಗೆ ಗುರುವಂದನೆ – ಸನ್ಮಾನ
ಕೋಟೇಶ್ವರ : “ಗುರು – ಶಿಷ್ಯರ ಸಂಬಂಧ ಬಹಳ ಗಟ್ಟಿಯಾದುದು. ಒಬ್ಬ ಪ್ರಾಧ್ಯಾಪಕನ ಸೇವಾವಧಿಯಲ್ಲಿ ಹಲವು ಮಂದಿ ಶಿಷ್ಯರು ಹಲವು ಕಾರಣಗಳಿಗಾಗಿ ನೆನಪಿನಲ್ಲುಳಿಯುತ್ತಾರೆ. ಇದೇ ರೀತಿ ವಿದ್ಯಾರ್ಥಿಗಳೂ ತಮ್ಮ ಅಧ್ಯಾಪರನ್ನು ಎಂದಿಗೂ ಮರೆಯುವುದಿಲ್ಲ. ಇಂದಿನ ಶಿಕ್ಷಣ ಪದ್ಧತಿಯಲ್ಲಿ ಆಧ್ಯಾತ್ಮದ ವಿಷಯವಿಲ್ಲ. ದೇಶಭಕ್ತಿಯನ್ನು ಸ್ಫುರಿಸುವ, ನಮ್ಮ ಉದಾತ್ತ ಸಂಸ್ಕೃತಿ, ಸನಾತನ ಧರ್ಮದ ಬಗ್ಗೆ ಮಾಹಿತಿ ನೀಡುವ, ಜೀವನ ಸಾಫಲ್ಯದ ದಾರಿ ತೋರುವ ಭಗವದ್ಗೀತೆ ಬಗ್ಗೆ ಉಲ್ಲೇಖವಿಲ್ಲ. ಇಂದು ವಿದ್ಯಾರ್ಥಿಗಳು ಕೇವಲ ಹಣಗಳಿಸುವ ಉದ್ದೇಶದಿಂದ ಅಂಕಗಳನ್ನು ಗಳಿಸುವ ಯಂತ್ರಗಳಾಗಿ ರೂಪುಗೊಳ್ಳುತ್ತಿದ್ದಾರೆ. ಆದ್ದರಿಂದಲೇ ಗುರು -ಶಿಷ್ಯ ಸಂಬಂಧ ದೂರಾಗುತ್ತಿದೆ” – ಎಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಕೋಟೇಶ್ವರ ಸೋಮಶೇಖರ ಉಡುಪ ಹೇಳಿದರು.
ಕುಂದಾಪುರದಲ್ಲಿ ಭಂಡಾರ್ಕಾರ್ಸ್ ಕಾಲೇಜು ಆರಂಭಗೊಂಡ ದಿನಗಳಲ್ಲೇ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ, ಸುದೀರ್ಘ 34 ವರ್ಷಗಳ ತಮ್ಮ ಸೇವಾವಧಿಯಲ್ಲಿನ ಪ್ರಮುಖ ಘಟನೆಗಳನ್ನು ಸ್ಮರಿಸಿಕೊಂಡ ಅವರು, ಆಧ್ಯಾತ್ಮ ಮತ್ತು ಯೋಗದ ಹಿರಿಮೆಯನ್ನು ವಿವರಿಸಿದರು.
ಕೋಟೇಶ್ವರ ವಲಯ ದ್ರಾವಿಡ ಬ್ರಾಹ್ಮಣ ಪರಿಷತ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಡಾ. ಉಡುಪರಿಗೆ ನೀಡಿದ ಗುರುವಂದನೆಯನ್ನು ಸ್ವೀಕರಿಸಿ ಅವರು ಕೃತಜ್ಞತೆಯ ನುಡಿಗಳನ್ನಾಡಿದರು.
ವಲಯಾಧ್ಯಕ್ಷ ಬಿ. ವಾದಿರಾಜ ಹೆಬ್ಬಾರ್, ವಿಪ್ರವಾಣಿ ಸಂಪಾದಕ, ಡಾ. ಉಡುಪರ ಸಹೋದ್ಯೋಗಿ ಪ್ರೊ. ಶಂಕರ ರಾವ್ ಕಾಳಾವರ ಹಾಗೂ ಹಿರಿಯ ಸದಸ್ಯರೊಡಗೂಡಿ ಡಾ. ಸೋಮಶೇಖರ ಉಡುಪ – ಪ್ರಮೋದಾ ಉಡುಪ ದಂಪತಿಯನ್ನು ವಲಯದ ಪರವಾಗಿ ಸನ್ಮಾನಿಸಿ ಗೌರವಿಸಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಬಿ. ವಿ., ನಾಗರತ್ನ ಉಡುಪ ಮತ್ತು ಸುಧಾ ಭಟ್ ಪ್ರಮೋದಾ ಉಡುಪರಿಗೆ ಮಂಗಳ ದ್ರವ್ಯಗಳನ್ನಿತ್ತು ವಂದಿಸಿದರು.
ವಲಯ ಗೌರವಾಧ್ಯಕ್ಷ ಗಣಪಯ್ಯ ಚಡಗ, ಉಪಾಧ್ಯಕ್ಷ ರಾಘವೇಂದ್ರ ಹತ್ವಾರ್, ಹಿರಿಯ ಸದಸ್ಯರಾದ ಬಿ. ಜಿ. ಸೀತಾರಾಮ ಧನ್ಯ, ವಾಸುದೇವ ಉಗ್ರಾಣಿ, ಗೌರವ ಸಲಹೆಗಾರ ವೈ. ಎನ್. ವೆಂಕಟೇಶ ಮೂರ್ತಿ ಭಟ್, ಶಿವರಾಮ ಉಪಾಧ್ಯ, ವೆಂಕಟೇಶ ಅರಸ್, ಯುವ ವಿಪ್ರ ವೇದಿಕೆ ಅಧ್ಯಕ್ಷ ನಾಗರಾಜ ಅಡಿಗ, ಶ್ರೀನಿವಾಸ ವೈದ್ಯ ಮೊದಲಾದವರು ಉಪಸ್ಥಿತರಿದ್ದರು.
ವಲಯಾಧ್ಯಕ್ಷ ಬಿ. ವಾದಿರಾಜ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಸುಧಾ ಭಟ್ ಪ್ರಾರ್ಥಿಸಿದರು. ಕಾರ್ಯದರ್ಶಿ ನಾಗೇಂದ್ರ ಬಿಳಿಯ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಹಿಳಾ ವೇದಿಕೆ ಅಧ್ಯಕ್ಷೆ ವಾಣಿಶ್ರೀ ಬಿ. ವಿ. ಸನ್ಮಾನ ಪತ್ರ ವಾಚಿಸಿದರು. ಕೆ. ಜಿ. ವೈದ್ಯ ಕಾರ್ಯಕ್ರಮ ನಿರೂಪಿಸಿ, ಮಹಿಳಾ ವೇದಿಕೆ ಕಾರ್ಯದರ್ಶಿ ನಾಗರತ್ನ ಉಡುಪ ವಂದಿಸಿದರು.