ಡೈಲಿ ವಾರ್ತೆ:07 ಸೆಪ್ಟೆಂಬರ್ 2023
ಗೃಹಲಕ್ಷ್ಮಿ’ ಹೊಸ ನೋಂದಣಿ ತಾತ್ಕಾಲಿಕ ಸ್ಥಗಿತ
ಬೆಂಗಳೂರು: “ಗೃಹ ಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಫಲಾಭುವಗಳಿಗೆ ಈಗಾಗಲೇ ಖಾತೆಗೆ ಹಣ ಜಮೆಯಾಗುತ್ತಿದೆ. ಕೆಲ ತಾಂತ್ರಿಕ ಕಾರಣದಿಂದ ಇನ್ನೂ ಕೆಲವರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲಿವರೆಗೂ ಹೊಸ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ.
ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಟ್ವಿಟ್ ಮಾಡಿ ಮಾಹಿತಿ ನೀಡಿದೆ.
“ಗೃಹ ಲಕ್ಷ್ಮಿಯೋಜನೆಗೆ ನೋಂದಾಯಿತ ಫಲಾನುಭವಿಗಳ ಖಾತೆಗೆ ರೂ.2000 ಜಮಾಗೊಳಿಸುವ ಪ್ರಕ್ರಿಯೆಯಲ್ಲಿ ಗೊಂದಲವಾಗದಿರಲೆಂದು, ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಶೀಘ್ರವೇ ನೋಂದಣಿ ಪುನರಾರಂಭಗೊಳ್ಳಲಿದೆ’ ಎಂದು ಇಲಾಖೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 1902 ಕ್ಕೆ ಕರೆಮಾಡುವಂತೆ ಇಲಾಖೆಯು ತಿಳಿಸಿದೆ.
ಟ್ವಿಟ್ ಡಿಲಿಟ್ ಮಾಡಿದ ಇಲಾಖೆ:
ಹೊಸ ನೋಂದಣಿಯನ್ನು ಸ್ಥಗಿತಗೊಳಿಸಿರುವ ಕುರಿತ ಟ್ವಿಟ್ ಅನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸದ್ಯ ಡಿಲಿಟ್ ಮಾಡಿದೆ. ಆದರೆ ಅದಕ್ಕೆ ಯಾವುದೇ ಕಾರಣ ಕೊಟ್ಟಿಲ್ಲ.
ತಾತ್ಕಾಲಿಕವಾಗಿ ಸ್ಥಗಿತ: ಡಿ.ಕೆ ಶಿವಕುಮಾರ್ ಸ್ಪಷ್ಟನೆ
‘ಈಗಾಗಲೇ 2 ಸಾವಿರ ರೂ. ಜಮೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದೆ. ಗೊಂದಲವಾಗದಿರಲಿ ಎಂದು ರಾಜ್ಯ ಸರ್ಕಾರ ನೋಂದಣಿ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನೋಂದಾಯಿತ ಫಲಾನುಭವಿಗಳಿಗೆ 2 ಸಾವಿರ ರೂ. ಜಮೆ ಆದ ನಂತರ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಕ್ರಿಯೆ ಪುನಾರಂಭಗೊಳ್ಳಲಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.