ಡೈಲಿ ವಾರ್ತೆ:07 ಸೆಪ್ಟೆಂಬರ್ 2023

ಕೋಟ ಸಮುದ್ರ ಕಿನಾರೆಗೆ ಅಪ್ಪಳಿಸಿದ ಮೀನುಗಾರಿಕೆ ಬೋಟ್ – ಲಕ್ಷಾಂತರ ರೂ. ನಷ್ಟ, ಮೀನುಗಾರರು ಪಾರು

ಬೋಟ್ ಮುಳುಗಡೆ ವಿಡಿಯೋ

ಕೋಟ: ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಮುಳುಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸೆ. 4 ರಂದು ರಾತ್ರಿ ಸುಮಾರು 8 ಗಂಟೆಗೆ ಕುಂದಾಪುರ ತಾಲೂಕಿನ ಕೊರಾಡಿ – ಕೊಮೆ ಸಮೀಪ ನಡೆದಿದೆ.

ಉಪ್ಪಿನಕೋಟೆಯ ಪವನ್ ಬಂಗೇರ ಮಾಲಕತ್ವದ ಶ್ರೀ ಸಿಗಂದೂರೇಶ್ವರಿ ಹೆಸರಿನ ಬೋಟ್ ನಲ್ಲಿ ಐದು ಜನ ಮೀನುಗಾರರೊಂದಿಗೆ ಹಂಗಾರಕಟ್ಟೆ ದಕ್ಕೆಯಿಂದ ಹೊರಟು ಕೊರಾಡಿ – ಕೊಮೆ ಸಮೀಪ ರಾತ್ರಿ ಮೀನುಗಾರಿಕೆ ನಡೆಸುತ್ತಿರುವಾಗ ಬೋಟಿನ ಇಂಜಿನ್ ಸ್ಥಬದ್ದಗೊಂಡಿತು.
ಅಕ್ಕಪಕ್ಕದ ಬೋಟ್ ಗಳು ಸಹಾಯಕ್ಕೆ ಬಂದರೂ ಕೂಡ ಪ್ರಯೋಜನವಾಗದೆ ಗಾಳಿಯ ರಭಸಕ್ಕೆ ಮರಳು ದಿಬ್ಬಕ್ಕೆ ಬಡಿದು ಮುಳುಗಲಾರಂಭಿಸಿತು.

ತಕ್ಷಣ ಬೋಟಿನಲ್ಲಿದ್ದ ಐವರು ಮೀನುಗಾರರಾದ ಪವನ್ ಬಂಗೇರ(26), ಆಶಿಶ್ ಶ್ರೀಯಾನ್(27), ಶಾಹಿದ್ (27), ಮೋಹನ್ (32), ಭೋಜ (37) ಇವರು ಸ್ಥಳೀಯರ ಸಹಾಯದಿಂದ ಈಜಿ ದಡ ಸೇರುವಲ್ಲಿ ಯಶಸ್ವಿಯಾದರು. ಆದರೆ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನುಗಳು ಹಾಗೂ ಮೀನುಗಾರಿಕೆ ಪರಿಕರಗಳು ಬೋಟಿನೊಂದಿಗೆ ಮುಳುಗಡೆಯಾಗಿದ್ದು ಸುಮಾರು ಅಂದಾಜು 23 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.



.