ಡೈಲಿ ವಾರ್ತೆ:08 ಸೆಪ್ಟೆಂಬರ್ 2023

ಬಿಜೆಪಿ-ಜೆಡಿಎಸ್ ಮೈತ್ರಿ ಖಚಿತ: ಮುಂದಿನ ವಾರ ದೆಹಲಿಯಲ್ಲಿ ಅಧಿಕೃತ ಘೋಷಣೆಗೆ ನಡೆದಿದೆ ಸಿದ್ಧತೆ

ಬೆಂಗಳೂರು: ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಖಚಿತವಾಗಿದ್ದು, ಅಧಿಕೃತ ಘೋಷಣೆಗೆ ಸಿದ್ಧತೆ ನಡೆದಿದೆ. ಅಂದುಕೊಂಡಂತೆ ನಡೆದರೆ, ಮುಂದಿನವಾರ ದೆಹಲಿಯಲ್ಲಿ ಎರಡು ಪಕ್ಷದ ನಾಯಕರಿಂದ ಮೈತ್ರಿ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.

ಲೋಕಸಭಾ ಚುನಾವಣೆಯಲ್ಲಿ ನಾಲ್ಕರಿಂದ ಐದು ಸ್ಥಾನಗಳ ಮೈತ್ರಿ ಬಗ್ಗೆ ಘೋಷಣೆಯಾಗುವ ಸಾಧ್ಯತೆ ಇದೆ. ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಹಾಗೂ ಬಿಜೆಪಿ ರಾಷ್ಟ್ರೀಯ ನಾಯಕರು ಜಂಟಿ ಪತ್ರಿಕಾಗೋಷ್ಠಿ ಮಾಡಿ ಘೋಷಣೆಗೆ ನಿರ್ಧಾರ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸದ್ಯ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಜತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಸಭೆ ನಡೆಸಿ ಮೈತ್ರಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ ಅವರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರಾಜ್ಯ ನಾಯಕರಿಗೂ ಮೈತ್ರಿಯ ಬಗ್ಗೆ ಸಂದೇಶ ರವಾನೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಅದಕ್ಕೆ ಪುಷ್ಠಿ ನೀಡುವಂತೆ ರಾಜ್ಯ ನಾಯಕರು ಸಹ ಮೈತ್ರಿಯ ಬಗ್ಗೆ ಬ್ಯಾಟ್ ಬೀಸಿದ್ದಾರೆ.

ಎಚ್‌ಡಿ ದೇವೇಗೌಡರು ಕರ್ನಾಟಕದಲ್ಲಿ ಐದು ಲೋಕಸಭಾ ಸ್ಥಾನಗಳನ್ನು ಕೋರಿದ್ದಾರೆ. ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆ ಐದು ಲೋಕಸಭಾ ಸ್ಥಾನಗಳು ಯಾವುವೆಂದರೆ, ಮಂಡ್ಯ, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಜೆಡಿಎಸ್ ಕೇಳಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ನಿರಾಕರಿಸಿ, ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡಲಿದೆ ಎಂದು ದೇವೇಗೌಡರು ಕಳೆದ ಜುಲೈ ತಿಂಗಳಲ್ಲಿ ಹೇಳಿದ್ದರು. ಆದರೆ, ಸುದೀರ್ಘ ಮಾತುಕತೆಯ ಬಳಿಕ ಇದೀಗ ಬಿಜೆಪಿ ಜತೆಗಿನ ಮೈತ್ರಿಗೆ ದೊಡ್ಡ ಗೌಡರು ಒಪ್ಪಿದ್ದಾರೆ.
ಕರ್ನಾಟಕವು ಒಟ್ಟು 28 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ. 2019ರ ಚುನಾವಣೆಯಲ್ಲಿ ಬಿಜೆಪಿಯು 25 ಸ್ಥಾನಗಳನ್ನು ಗೆದ್ದರೆ, ಪಕ್ಷದ ಬೆಂಬಲಿತ ಅಭ್ಯರ್ಥಿ ಕೂಡ ವಿಜಯಶಾಲಿಯಾದರು. ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಒಂದು ಸ್ಥಾನ ಪಡೆದುಕೊಂಡಿವೆ. ಜೆಡಿಎಸ್ ಭದ್ರಕೋಟೆಯಾದ ಹಾಸನದಲ್ಲಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿದ್ದರು.